ಸಾರಾಂಶ
ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರದ ಜನತೆ ತೋರಿಸುತ್ತಿರುವ ಅಭಿಮಾನ, ಪ್ರೀತಿ, ಬೆಂಬಲ ನೋಡಿದರೆ ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲ್ಲುವ ವಿಶ್ವಾಸವಿದೆ. ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹೊರ ದರೋಜಿ ಗ್ರಾಮದಲ್ಲಿ ಬಿಜೆಪಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಪ್ರಚಾರ ಮಾಡಿ, ಮತಯಾಚಿಸಿ ಮಾತನಾಡಿದರು.ಮೂರು ದಿನಗಳ ಕಾಲ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಂಗಾರು ಹನುಮಂತು ಅವರ ಪರವಾಗಿ ಪ್ರಚಾರ ನಡೆಸಿ, ಮತಯಾಚಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಬಿಜೆಪಿ ಮುಖಂಡರು, ಪಕ್ಷದ ರಾಜ್ಯ ನಾಯಕರು ಒಟ್ಟಾಗಿ ಬಂಗಾರು ಹನುಮಂತು ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ರಚಿಸಲಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಹೊಡೆಯಲಾಗಿದೆ. ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ. ಕ್ಷೇತ್ರದ ಜನತೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಅಭ್ಯರ್ಥಿ ಬಂಗಾರು ಹನುಮಂತು ಮತಯಾಚಿಸಿದರು. ಶಾಸಕರಾದ ಅರಗ ಜ್ಞಾನೇಂದ್ರ, ಜನಾರ್ದನ ರೆಡ್ಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.
ಶಾಸಕರಾದ ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ, ಮುಖಂಡ ದರೋಜಿ ರಮೇಶ್, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.