ಮನುಷ್ಯನಿಗೆ ಜೀವನ ಪ್ರೀತಿ ಬಹಳ ಮುಖ್ಯ. ಸಂಗೀತ, ಸಾಹಿತ್ಯ ಕಲೆಗಳ ಬಗೆಗಿನ ಆಸಕ್ತಿಯಿಂದ ಜೀವನೋತ್ಸಾಹ ಹೆಚ್ಚಿ ಬದುಕು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಸಮಾಜದಲ್ಲಿ ಗುರುತಿಕೊಳ್ಳಲು ಸಭ್ಯ, ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮನುಷ್ಯ ಸಮಾಜದಲ್ಲಿ ಗುರುತಿಸಿಕೊಂಡು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಕಾವ್ಯ, ಸಾಂಸ್ಕೃತಿಕ ಪ್ರೀತಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಖ್ಯಾತ ವೈದ್ಯ, ಸಾಹಿತಿ ಡಾ.ಚಂದ್ರಶೇಖರ್ ಅಭಿಪ್ರಾಯಿಸಿದರು.

ನಗರದ ಶ್ರೀವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾವೇದಿಕೆ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾವ್ಯ ಸಂಗೀತ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಜೀವನ ಪ್ರೀತಿ ಬಹಳ ಮುಖ್ಯ. ಸಂಗೀತ, ಸಾಹಿತ್ಯ ಕಲೆಗಳ ಬಗೆಗಿನ ಆಸಕ್ತಿಯಿಂದ ಜೀವನೋತ್ಸಾಹ ಹೆಚ್ಚಿ ಬದುಕು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಸಮಾಜದಲ್ಲಿ ಗುರುತಿಕೊಳ್ಳಲು ಸಭ್ಯ, ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಖ್ಯಾತ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿ ಹಾಗೂ ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳನ್ನು ಉದಾಹರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಕನ್ನಡ ಭಾಷಾಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು, ಇದಕ್ಕೆ ಪೂರಕವಾಗಿ ಕಲೆ, ಸಾಂಸ್ಕೃತಿಕ ಪರಂಪರೆಯನ್ನು ಪ್ರೀತಿಸಿ ಪ್ರೋತ್ಸಾಹಿಸಿ ಕನ್ನಡ ನಾಡಿನ ಅಭಿವೃದ್ಧಿಗೆ ಎಲ್ಲರೂ ಹೋರಾಟ ನಡೆಸಬೇಕು ಎಂದರು.

ಶ್ರೀರಂಜಿನಿ ಕಲಾವೇದಿಕೆ ಕಾರ್ಯಕ್ರಮದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಸಾಧಕರ ಬಗ್ಗೆ ಲಯನ್ ಕೆ.ಟಿ.ಹನುಮಂತು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ತ.ನಾ.ಶಿವಕುಮಾರ್ (ಸಾಹಿತ್ಯ) ಎಸ್.ಕೆ.ಶಿವಪ್ರಕಾಶ್ ಬಾಬು (ಸಮಾಜ ಸೇವೆ), ಎಂ.ಗುರುಪ್ರಸಾದ್ (ಕಾನೂನು ಹೋರಾಟ), ಜನಾರ್ಧನ್ ಕೊಂಡ್ಲಿ (ಶಿಕ್ಷಣ, ಕಿರುತೆರೆ), ಡಾ.ಆರ್.ಮನೋಹರ್ (ವೈದ್ಯಕೀಯ) ವೀಣಾ ಮೈಸೂರು (ಶಿಕ್ಷಣ)ಅವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಕ್ಷಣಾ ವೇದಿಕೆಯ ಮುಖ್ಯಸ್ಥ ಕೆ.ಟಿ.ಶಂಕರೇಗೌಡ, ಜಿಲ್ಲಾ ಬ್ರಾಹ್ಮಣ ಸಭಾದ ನಿರ್ದೇಶಕ ಜಿ.ವಿ.ನಾಗರಾಜು, ವೈದ್ಯೆ ಡಾ.ಅನುಪಮಾ ಭಾಗವಹಿಸಿದ್ದರು. ಕಾವ್ಯ ಸಂಗೀತ ಸಂಭ್ರಮದ ಗಮಕ ವಾಚನದಲ್ಲಿ ಕಲಾಶ್ರೀ ವಿದ್ಯಾಶಂಕರ್, ಹಿರಿಯ ತತ್ವಪದ ಗಾಯನದಲ್ಲಿ ಗೊರವಾಲೆ ರುದ್ರಪ್ಪ, ಗಿಟಾರ್ ವಾದನದಲ್ಲಿ ಧನ್ಯತಾ ಹಾಗೂ ಕೀಬೋರ್ಡ್ ವಾದನದಲ್ಲಿ ಸಮರ್ಥ, ಕರೋಕೆ ಗಾಯನದಲ್ಲಿ ಡಾ. ಅನುಪಮಾ ರಮೇಶ್ ಬಡಿಗೇರ್ ವಿಶೇಷ ಗಮನ ಸೆಳೆದರು. ವೇದಿಕೆ ಅಧ್ಯಕ್ಷ ಸಿ.ಪಿ.ವಿದ್ಯಾಶಂಕರ್ ಸ್ವಾಗತಿಸಿ ಜನಾರ್ಧನ್ ಕೊಂಡ್ಲಿ ನಿರೂಪಿಸಿದರು.