ಸಾಹಿತ್ಯದ ಅನನ್ಯತೆ ಉಳಿಸಲು ಪ್ರೀತಿ ಬೇಕು: ಆರ್‌. ಗಣೇಶ್‌

| Published : Jan 13 2025, 12:47 AM IST

ಸಾರಾಂಶ

7ನೇ ಲಿಟ್‌ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಶತಾವಧಾನಿ ಡಾ.ಆರ್‌. ಗಣೇಶ್‌ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಲೆ, ಸಾಹಿತ್ಯವನ್ನು ಮೌಲ್ಯವಾಗಿ ನೋಡಬೇಕು. ಈ ಅನನ್ಯತೆ ಉಳಿಸಿಕೊಳ್ಳಲು ಪ್ರೀತಿಯ ಅಗತ್ಯತೆ ಇದೆ ಎಂದು ಶತಾವಧಾನಿ ಡಾ.ಆರ್‌. ಗಣೇಶ್‌ ಹೇಳಿದ್ದಾರೆ.

ನಗರದಲ್ಲಿ ನಡೆದ 7ನೇ ಲಿಟ್‌ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂಸ್ಕೃತ ಕಾವ್ಯಶಾಸ್ತ್ರ ಅಂತರ್ಜಾಲದಲ್ಲಿ ಸಲೀಲಾಗಿ ಸಿಗುತ್ತದೆ. ಇದನ್ನು ಪ್ರೀತಿಯಿಂದ ಮಾಡಿಕೊಂಡು ಬಂದಿದ್ದರಿಂದ ಸಾಧ್ಯವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಇದೇ ರೀತಿಯಲ್ಲಿ ನಡೆಸಿಕೊಂಡು ಬರಲಾಗಿದೆ. ಕಲೆ- ಸಾಹಿತ್ಯದ ಅನನ್ಯತೆಯನ್ನು ಉಳಿಸಿಕೊಳ್ಳಲು ಇಂತಹ ಪ್ರೀತಿ ತುಂಬ ಅಗತ್ಯ ಎಂದರು.

ಪ್ರಸ್ತುತ ಅಸಂಬದ್ಧವಾಗಿ ಬರೆಯುವವರಿಗೆ ಉತ್ತರ ನೀಡುವವರು ನಮ್ಮಲ್ಲಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ ಆರ್‌.ಗಣೇಶ್‌, ಕಲೆ, ಸಾಹಿತ್ಯ ಕಮ್ಯೂನಿಟಿ ಸೆಂಟ್ರಿಕ್‌ ಆಗುವುದಕ್ಕಿಂತ ಮುಖ್ಯವಾಗಿ ಅದರ ಸ್ವಾಯತ್ತತೆ, ಮೌಲ್ಯ ಉಳಿಸಿಕೊಳ್ಳುವ ಪ್ರೀತಿಯ ಕಾರ್ಯ ಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ಸಿಗುವಷ್ಟು ಶಾಸ್ತ್ರಗಳು ಎಲ್ಲೂ ಸಿಗಲ್ಲ. ಆದರೆ ಈ ಶಾಸ್ತ್ರಗಳನ್ನು ಓದುವವರು ಎಷ್ಟು ಮಂದಿ ಇದ್ದಾರೆ? ವಿಶ್ವ ವಿದ್ಯಾನಿಲಯಗಳು, ಅಕಾಡೆಮಿಗಳು ಪರಿಶ್ರಮದ ಪಾಂಡಿತ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಲೇಖಕ ಡಾ.ಅಜಕ್ಕಳ ಗಿರೀಶ್‌ ಭಟ್‌ ಇದ್ದರು.

--------------

ಭಾವನಾ ಅರೋರಾ ‘ನಾಗ್ರೋಟ ಅಂಡರ್ ಸೀಜ್’ ಕೃತಿ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಮಂಗಳೂರುಭಾವನಾ ಅರೋರಾ ಅವರು ಬರೆದಿರುವ ‘ನಾಗ್ರೋಟಾ ಅಂಡರ್ ಸೀಜ್’ ಪುಸ್ತಕ ಮಂಗಳೂರು ಲಿಟ್‌ ಫೆಸ್ಟ್‌ನ 2ನೇ ದಿನ ಭಾನುವಾರ ಲೋಕಾರ್ಪಣೆಗೊಂಡಿತು.

೨೦೧೬ ರ ನವೆಂಬರ್ ೨೯ರಂದು ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾ ಸೇನಾ ಶಿಬಿರ ದಾಳಿ ಘಟನೆಯಲ್ಲಿ ಭಾರತದ ಸೇನಾ ಯೋಧರನ್ನು ಕಳೆದುಕೊಂಡಿದೆ. ನಗ್ರೋಟಾ ದಾಳಿಯಲ್ಲಿ ತನ್ನ ಮಗನನ್ನು ಕಳೆದುಕೊಂಡಿರುವ ಮೇಘನಾ ಗಿರೀಶ್ ಅಂತವರ ತ್ಯಾಗ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಲೇಖಕಿ ಭಾವನಾ ಅರೋರಾ ಹೇಳಿದರು.ಲೇಖಕಿ ಮೇಘನಾ ಗಿರಿಶ್ ಅವರು ನಮ್ಮ ರಾಷ್ಟ್ರದ ಅಪರಿಚಿತ ವೀರರ ತ್ಯಾಗ ಮತ್ತು ಸಾಹಸಗಳ ಬಗ್ಗೆ ಮಾತನಾಡುತ್ತಾ ಘಟನೆಗಳಿಗೆ ಮರು ಜೀವ ನೀಡಿದರು.

ಪತ್ರಕರ್ತ ಮತ್ತು ಲೇಖಕ ಶಿವ್ ಆರೂರ್ ಮಾತನಾಡಿ, ಈ ದೇಶದ ಮೊದಲ ೬೦ ರಿಂದ ೭೦ ವರ್ಷ ಸೇನೆಯು ಸೌಲಭ್ಯಗಳಿಂದ ವಂಚಿತವಾಗಿತ್ತು. ನಮ್ಮ ದೇಶವು ಅಮೆರಿಕಗಿಂತ ಹೆಚ್ಚು ಯುದ್ಧಗಳನ್ನು ಹೋರಾಡಿದ ದೇಶವಾಗಿದೆ ಎಂದು ಹೇಳಿದರು.

ಸುರಭಿ ಹೊಡಿಗೆರೆ ಗೋಷ್ಠಿ ನಿರ್ವಹಿಸಿದರು.

----------------

ಡಾ.ಆರ್‌.ಬಾಲಸುಬ್ರಹ್ಮಣ್ಯಂಗೆ ‘ಮಂಗಳೂರು ಲಿಟ್‌ ಫೆಸ್ಟ್‌-2025’ ಗೌರವ ಪ್ರದಾನ

ಕನ್ನಡಪ್ರಭ ವಾರ್ತೆ ಮಂಗಳೂರುಈಗಿನ ಯುವಜನತೆ ದೇಶದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದೇಶದ ಕೊರತೆಗೆ ನಮ್ಮಲ್ಲೇ ಉತ್ತರ ಕಂಡುಕೊಳ್ಳುವ ಬದಲು ಪಾಶ್ಚಾತ್ಯದತ್ತ ಮುಖ ಮಾಡುತ್ತೇವೆ. ವಿದೇಶಿಗರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ನಾವು ನಮ್ಮ ದೇಶವನ್ನು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ ನಾಯಕತ್ವ ದೃಷ್ಟಿಯಿಂದ ನೋಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಾಮರ್ಥ್ಯ ಆಯೋಗ ಸದಸ್ಯ ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್‌ ಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ಆಶಿಸಿದರು.

ಮಂಗಳೂರಿನಲ್ಲಿ ನಡೆದ ಲಿಟ್‌ ಫೆಸ್ಟ್‌-2025ರ 2ನೇ ದಿನ ಭಾನುವಾರ ಈ ಸಾಲಿನ ‘ಮಂಗಳೂರು ಲಿಟ್‌ ಫೆಸ್ಟ್‌’ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ಇವರ ‘ಪವರ್‌ ವಿತ್‌ಇನ್‌’ ಆಂಗ್ಲ ಕೃತಿಯನ್ನು ಸಂಸದ ಹಾಗೂ ಭಾರತ್‌ ಫೌಂಡೇಷನ್‌ ಟ್ರಸ್ಟಿ ಕ್ಯಾ.ಬ್ರಿಜೇಶ್‌ ಚೌಟ ಅನಾವರಣಗೊಳಿಸಿದರು. ಮಿಥಿಕ್‌ ಸೊಸೈಟಿ ಗೌರವ ಕಾರ್ಯದರ್ಶಿ ಡಾ.ರವಿ, ಟ್ರಸ್ಟಿ ಶ್ರೀರಾಜ್‌ ಗುಡಿ ಇದ್ದರು.

-------------