ಲವ್ ಜಿಹಾದಿಗಳೇ ಎಚ್ಚರ; ಕೊಡುವೆವು ಉತ್ತರ

| Published : May 30 2024, 12:51 AM IST

ಸಾರಾಂಶ

ದಾವಣಗೆರೆಯಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮಸೇನೆ ಸ್ಥಾಪಿಸಿದ ಸಹಾಯವಾಣಿ ಪೋಸ್ಟರನ್ನು ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಬಿಡುಗಡೆ ಮಾಡಿ, ರಾಜ್ಯದ ಯಾವುದೇ ಮೂಲೆಯಿಂದ ಕರೆ ಬಂದರೂ ಶ್ರೀರಾಮಸೇನೆ ಸಹಾಯಕ್ಕೆ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ಲವ್ ಜಿಹಾದ್‌ನಲ್ಲಿ ಸಿಲುಕಿ, ಸಂಕಷ್ಟ ಅನುಭವಿಸುತ್ತಿರುವ ಹಿಂದು ಹೆಣ್ಣು ಮಕ್ಕಳು, ಯುವತಿಯರ ರಕ್ಷಣೆ, ಅನುಕೂಲಕ್ಕಾಗಿ ‘ಲವ್ ಜಿಹಾದಿಗಳೇ ಎಚ್ಚರ, ಕೊಡುವೆವು ಉತ್ತರ’ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಇಂದಿನಿಂದ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ-90904-43444ನ್ನು ಶ್ರೀರಾಮ ಸೇನೆ-ಕರ್ನಾಟಕ ಆರಂಭಿ ಸಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಕರೆ ಬಂದರೂ ಶ್ರೀರಾಮಸೇನೆ ಸಹಾಯಕ್ಕೆ ಸಿದ್ಧವಾಗಿರುತ್ತದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಯುವತಿಯರು, ಮಹಿಳೆಯರ ರಕ್ಷಣೆಗಾಗಿ ಶ್ರೀರಾಮಸೇನಾ ಕರ್ನಾಟಕದಿಂದ ಸಹಾಯವಾಣಿ ಕಾರ್ಯ ನಿರ್ವಹಿಸಲಿದ್ದು, ಕಲಬುರಗಿಯಲ್ಲಿ ಸೇನೆ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮಿ, ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ದಾವಣಗೆರೆಯಲ್ಲಿ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ, ಬೆಂಗಳೂರು, ಮಂಗಳೂರು, ಬಾಗಲಕೋಟೆಯಲ್ಲಿ ಇಂದಿನಿಂದ ಏಕಕಾಲಕ್ಕೆ ಸಹಾಯವಾಣಿ ತನ್ನ ಸೇವೆ ಆರಂಭಿಸಿದೆ ಎಂದರು. ಹಿಂದೂ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಲವ್ ಜಿಹಾದ್ ಸಂತ್ರಸ್ತರ ನೆರವಿಗಾಗಿ ಮಾತ್ರ ಸಹಾಯವಾಣಿ ಕರೆ ಸ್ವೀಕರಿಸಲಿದೆ. ಕರೆ ಮಾಡಿದವರ ಮಾಹಿತಿ, ಹೆಸರನ್ನು ಗೌಪ್ಯವಾಗಿಡಲಾಗುವುದು. ಹಿಂದೂ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರನ್ನು ಲವ್ ಜಿಹಾದ್ ಜಾಲಕ್ಕೆ ಬೀಳಿಸಲು ಮುಸ್ಲಿಂ ಯುವಕರಿಗೆ ತರಬೇತಿ ನೀಡಿ, ಮುಸ್ಲಿಂ ಹುಡುಗರು ಹಿಂದುಗಳ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳ ಹಿಂದೆ ಬಿದ್ದು, ಪ್ರೀತಿ, ಪ್ರೇಮದ ಹೆಸರಿನಲ್ಲಿ ಬಲೆಗೆ ಬೀಳಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ದೂರಿದರು. ಮೋಸದ ಪ್ರೀತಿ, ಆಕರ್ಷಣೆ ತೋರಿಸಿ, ಆಕರ್ಷಕ ಉಡುಗೊರೆ ನೀಡುವ ಮೂಲಕ ಲವ್ ಜಿಹಾದ್‌ನ ಮೊದಲ ಹೆಜ್ಜೆ ಇಡುತ್ತಾರೆ. ಬಲೆಗೆ ಬಿದ್ದ ಹಿಂದೂ ಯುವತಿಯರು, ಮಹಿಳೆಯರಿಗೆ ಡ್ರಗ್ಸ್‌, ಮದ್ಯಪಾನ, ವಶೀಕರಣ, ಅಶ್ಲೀಲ ಫೋಟೋ, ವೀಡಿಯೋ ಮಾಡಿಕೊಂಡು, ಬ್ಲಾಕ್‌ ಮೇಲ್‌ ಮಾಡುವುದು ಸೇರಿದಂತೆ ಇತರೆ ಮಾರ್ಗಗಳನ್ನು ಬಳಸಿ, ತಮ್ಮ ವಶದಲ್ಲಿಟ್ಟುಕೊಳ್ಳುವ ಕುತಂತ್ರ ನಡೆಸಲಾಗುತ್ತಿದೆ. ಅಲ್ಲದೇ, ಆಸ್ತಿ ಕಬಳಿಕೆ, ನಿಖಾ, ಹಿಜಾಬ್‌, ಗೋಮಾಂಸ ಭಕ್ಷಣೆ, ನಮಾಜ್ ಮಾಡಿಸುವುದು ಸೇರಿದಂತೆ ಅನೇಕ ವಿಧದ ಮೂಲ ಹಿಂದು ಯುವತಿಯರು, ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸುವ ಕೆಲಸ ಆಗುತ್ತಿವೆ ಎಂದು ಅವರು ಆರೋಪಿಸಿದರು. ತಮ್ಮ ಜಾಲಕ್ಕೆ ಸಿಲುಕಿದ ಹಿಂದೂ ಯುವತಿಯರು, ವಿದ್ಯಾರ್ಥಿನಿಯರು, ಮಹಿಳೆಯರನ್ನು ಭಯೋತ್ಪಾದನಾ ಕೃತ್ಯಕ್ಕೆ, ಗೂಢಾಚಾರಿಕೆಗೆ, ವೇಶ್ಯಾವಾಟಿಕೆಗೆ ಬಳಸಿಕೊಂಡು, ಹಿಂದು ಹೆಣ್ಣು ಮಕ್ಕಳ ಜೀವನ, ಬದುಕನ್ನೇ ಹಾಳು ಮಾಡಲಾಗುತ್ತಿದೆ. ಇಸ್ಲಾಂ ಜನಸಂಖ್ಯೆ ಹೆಚ್ಚಳಕ್ಕೆ, ವಿದೇಶಕ್ಕೆ ವೇಶ್ಯಾವಾಟಿಕೆಗೆ ಮಾರಾಟಕ್ಕೆ ಲವ್ ಜಿಹಾದ್‌ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಒಪ್ಪದಿದ್ದರೆ ಕಡೆಗೆ ಕೊಲೆಯಲ್ಲಿ ಅಂತ್ಯ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇದೆಲ್ಲದರ ನಿಯಂತ್ರಣಕ್ಕೆ, ಅಂತ್ಯ ಹಾಡಲು ಶ್ರೀರಾಮಸೇನೆ ಸಹಾಯವಾಣಿ ಸ್ಥಾಪಿಸಿದ್ದು, ಹಿಂದು ಹೆಣ್ಣು ಮಕ್ಕಳ ಧ್ವನಿಯಾಗಿ ನಿಲ್ಲಲಿದೆ ಎಂದು ಗಂಗಾಧರ ಕುಲಕರ್ಣಿ ಸ್ಪಷ್ಟಪಡಿಸಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ವಿಭಾಗೀಯ ಪ್ರಮುಖ ಪರಶುರಾಮ ನಡುಮನಿ, ಪಿ.ಸಾಗರ್, ಬಿ.ಜಿ.ರಾಹುಲ್‌, ಶ್ರೀಧರ, ಶಿವರಾಜ ಪೂಜಾರ, ಸುನಿಲ್ ವಾಲಿ, ಸಿದ್ಧಾರ್ಥ, ರಾಜು, ವಿನಯ್, ಶಿವಮೊಗ್ಗ ಶಶಿಕುಮಾರ ಇತರರು ಇದ್ದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ ಮಾತನಾಡಿ, ಸಹಾಯವಾಣಿ ಪೋಸ್ಟರ್‌ಗಳನ್ನು ಹೊಟೆಲ್, ಜ್ಯೂಸ್‌ ಸ್ಟಾಲ್, ಅಂಗಡಿ, ಬೇಕರಿ, ವಾಹನಗಳ ಮೇಲೆ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು. ಪಾರ್ಕ್‌, ಜನ ವಸತಿ ಪ್ರದೇಶ, ವಿದ್ಯಾಸಂಸ್ಥೆಗಳಲ್ಲೂ ಜಾಗೃತಿ ಮೂಡಿಸಲಾಗುವುದು. ಹಿಂದು ಸಮಾಜ ಇನ್ನಾದರೂಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿನ ಡಿವೈಎಸ್ಪಿ, ಸಿಪಿಐ, ಎಸ್‌ಐ ಅಮಾನತು ಆದೇಶ ಹಿಂಪಡೆಯಬೇಕು ಎಂದರು.ಲವ್ ಜಿಹಾದ್ ಕ್ಯಾನ್ಸರ್‌ನಂತೆ ಬಾಧಿಸಿದೆಲವ್ ಜಿಹಾದ್ ಹಿಂದೂ ಸಮಾಜಕ್ಕೆ ಕ್ಯಾನ್ಸರ್‌ನಂತೆ ಬಾಧಿಸುತ್ತಿದೆ. ಹೋಪ್ ಇಂಡಿಯಾ ಉತ್ತರ ಭಾರತದಲ್ಲಿ ಲವ್ ಜಿಹಾದ್‌ನ ಸಮೀಕ್ಷೆ ವರದಿ ಪ್ರಕಟಿಸಿದೆ. 153 ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್‌ಗಾಗಿ ಕೊಲೆ ಮಾಡಲಾಗಿದೆ. ಇದರಲ್ಲಿ ಶೇ.27.5ರಷ್ಟು ಅಪ್ರಾಪ್ತೆಯರು, ಶೇ.15.7ರಷ್ಟು ಪರಿಶಿಷ್ಟ ಜಾತಿ-ಪಂಗಡದ ಮಹಿಳೆಯರು. ಲವ್ ಜಿಹಾದ್ ಗೆ ತೊಡಗುವ ಶೇ.62.3ರಷ್ಟು ಮುಸ್ಲಿಂ ಯುವಕರು ತಮ್ಮ ಗುರುತನ್ನೇ ಮರೆ ಮಾಚಿ, ಹಿಂದೂ ಹೆಸರು, ಸಿಖ್‌, ಜೈನ್‌ ಸಮುದಾಯದವನೆಂದು, ತನ್ನ ಹೆಸರನ್ನು ಬದಲಿಸಿಕೊಂಡು ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಜಾಲಕ್ಕೆ ಬೀಳಿಸುವ ಬಗ್ಗೆ ಸಾಕ್ಷ್ಯ ಸಮೇತ ಹೋಪ್ ಇಂಡಿಯಾ ವಿವರಿಸಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯೂ ಸಹ ಲವ್ ಜಿಹಾದ್ ಆಗಿದ್ದು, ಕಣ್ಮರೆಯಾಗುವ ಅಪ್ರಾಪ್ತೆ ಯುವತಿಯರು, ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಸಂಗತಿ ಬೆಚ್ಚಿ ಬೀಳಿಸುವಂತಿವೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.ಹಿಂದೂ ಯುವತಿಯರಿಗೆ ಜೂ.9 ಕ್ಕೆ ತ್ರಿಶೂಲ ದೀಕ್ಷೆ

ಶ್ರೀರಾಮ ಸೇನಾ-ಕರ್ನಾಟಕದಿಂದ ಹಿಂದೂ ವಿದ್ಯಾರ್ಥಿನಿಯರು, ಯುವತಿಯರಿಗೆ ತ್ರಿಶೂಲ ದೀಕ್ಷೆಯನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಜೂ.9 ರಂದು ನೀಡಲಿದ್ದು, ಈ ಮೂಲಕ ಹಿಂದು ಯುವತಿಯರಲ್ಲಿ ಧೈರ್ಯ ತುಂಬುವ ಹಾಗೂ ಸ್ವಸುರಕ್ಷತೆಗಾಗಿ ತಲ್ವಾರ್‌ ಹಾಗೂ ಏರ್‌ಗನ್ ತರಬೇತಿಯನ್ನೂ ನೀಡುವ ಮೂಲಕ ದೀಕ್ಷೆ ನೀಡಲಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.