ಲವ್‌, ಸೆಕ್ಸ್‌ ದೋಖಾ: ಠಾಣೆ ಮುಂದೆ ಯುವತಿ ಧರಣಿ

| Published : Jun 08 2024, 12:36 AM IST

ಸಾರಾಂಶ

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನನ್ನು ಬಂಧಿಸಿ ನನ್ನೊಂದಿಗೆ ಮದುವೆ ಮಾಡಿಸಿ ಎಂದು ಯುವತಿಯೊಬ್ಬಳು ಶುಕ್ರವಾರ ತನ್ನ ಕುಟುಂಬ ಸಮೇತ ಇಲ್ಲಿನ ಠಾಣೆಯ ಮುಂದೆ ಧರಣಿ ನಡೆಸಿದ್ದಾಳೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನನ್ನು ಬಂಧಿಸಿ ನನ್ನೊಂದಿಗೆ ಮದುವೆ ಮಾಡಿಸಿ ಎಂದು ಯುವತಿಯೊಬ್ಬಳು ಶುಕ್ರವಾರ ತನ್ನ ಕುಟುಂಬ ಸಮೇತ ಇಲ್ಲಿನ ಠಾಣೆಯ ಮುಂದೆ ಧರಣಿ ನಡೆಸಿದ್ದಾಳೆ.

ಆದರೆ, ಈ ಯುವತಿಯಿಂದಲೇ ನನಗೆ ಅನ್ಯಾಯವಾಗಿದೆ ಎಂದು ಆ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಈ ಪ್ರಕರಣ ಈಗ ಇಲ್ಲಿನ ಪೊಲೀಸರಿಗೆ ತಲೆನೋವಾಗಿದೆ.

ಇಲ್ಲಿಗೆ ಸಮೀಪದ ಮರ್ಲಾನಹಳ್ಳಿ ಗ್ರಾಮದ ಯುವತಿ ಸುಮಿತ್ರಾ ತನ್ನ ಪಾಲಕರೊಂದಿಗೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದು, ಶಾರ್ಟ್ ಮೂವಿಸ್‌ನ ನಿರ್ದೇಶಕ, ಯುಟ್ಯೂಬ್ ಚಾನೆಲ್ ಕೂಡಾ ಮಾಡಿಕೊಂಡಿದ್ದ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ನ ನಾಗೇನಹಳ್ಳಿಯ ರವಿರಾಜ್ ಕರಿಯಪ್ಪನಿಂದ ನನಗೆ ಮೋಸವಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಮದುವೆ ಮಾಡಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಿದ್ದಾಳೆ.

ಯುವತಿ ಸುಮಿತ್ರಾ, ತಾನು ಪ್ರೀತಿಸಿದ ಯುವಕನಿಂದ ತನಗೆ ಅನ್ಯಾಯವಾಗಿದೆ. ಲೈಂಗಿಕ ದೌರ್ಜನ್ಯವೆಸಗಿ, ಇದೀಗ ಮದುವೆಯಾಗುತ್ತಿಲ್ಲ. ತನಗೆ ಲವ್, ಸೆಕ್ಸ್ ದೋಖಾ ಆಗಿದೆ. ರವಿರಾಜ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವಿಡಿಯೋ ಇಟ್ಟುಕೊಂಡು ನನಗೆ ಬೆದರಿಕೆ ಹಾಕಿ ಮೇಲಿಂದ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದೀಗ ಮದುವೆಯಾಗದ ತನ್ನ ಬಾಳನ್ನು ಹಾಳು ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಕಾರಟಗಿ ತಾಲೂಕಿನ ಮರ್ಲಾನಹಳ್ಳಿಯಿಂದ ತನ್ನ ಸಹೋದರಿಯಿದ್ದ ಗಂಗಾವತಿ ತಾಲೂಕಿನ ನಾಗೇನಹಳ್ಳಿಗೆ ಆಗಾಗ ಹೋಗುತ್ತಿದ್ದಳಂತೆ. ಅಲ್ಲಿಂದಲೇ ಕಾಲೇಜಿಗೆ ಹೋಗಿ ಬಂದು ಮಾಡ್ತಿದ್ದಳಂತೆ. ಆಗ ತನ್ನದೇ ಸಮುದಾಯದ ರವಿರಾಜ್ ಪರಿಚಯವಾಗಿ ಇಬ್ಬರೂ ಪ್ರೀತಿಸಿದ್ದರು. ಇಬ್ಬರ ಪ್ರೀತಿಗೆ ಎರಡು ಮನೆಯವರು ವಿರೋಧ ಮಾಡಿದ್ದರಂತೆ. ಆದರೆ, ರವಿರಾಜ್ ಎರಡೂ ಮನೆಯವರನ್ನು ಒಪ್ಪಿಸಿ ಯುವತಿ ಮನೆಗೆ ಹೋಗಿ, ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೇನೆ ಎಂದು ಆಕೆಯ ಹೆತ್ತವರಿಗೆ ಹೇಳಿದ್ದನಂತೆ.

ನಂತರ ಮದುವೆ ನಿಶ್ಚಯ ಶಾಸ್ತ್ರವೂ ಆಗಿತ್ತು. ೨೦೨೧ರ ಮಾರ್ಚ್ ೧೭ರಂದು ಯುವತಿ ಮನೆಗೆ ಬಂದಿದ್ದ ರವಿರಾಜ್, ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಹೇಳಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳಸಿದ್ದನಂತೆ. ಆ ಖಾಸಗಿ ಕ್ಷಣದ ವಿಡಿಯೋ ಕೂಡಾ ಮಾಡಿಟ್ಟುಕೊಂಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಅದೇ ವಿಡಿಯೋ ಇಟ್ಟುಕೊಂಡು ಮೇಲಿಂದ ಮೇಲೆ ಕೊಪ್ಪಳ ನಗರದಲ್ಲಿರುವ ಸಂಬಂಧಿಯ ಪೊಲೀಸ್ ಕ್ವಾಟರ್ಸ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನಂತೆ. ಮೂರ್ನಾಲ್ಕು ಬಾರಿ ಅಬಾರ್ಶನ್ ಮಾಡಿಸಿದ್ದಾನಂತೆ.

ಕಳೆದ ಕೆಲ ದಿನಗಳಿಂದ ಮದುವೆಯಾಗಲು ನಿರಾಕರಿಸಿದ್ದಾನೆ. ಆತನ ಕುಟುಂಬದವರ ಮಾತು ಕೇಳಿ ನನ್ನ ಮದುವೆಯಾಗುತ್ತಿಲ್ಲ. ಇದೀಗ ನನ್ನ ಬಾಳು ಹಾಳಾಗಿದೆ. ನನಗೆ ನ್ಯಾಯ ಬೇಕು ಎಂದು ಯುವತಿ ಹೇಳುತ್ತಿದ್ದಾಳೆ. ರವಿರಾಜ್ ಸೇರಿದಂತೆ ಆತನ ಕುಟುಂಬದವರ ವಿರುದ್ದ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನಗೆ ನ್ಯಾಯ ಕೊಡಿಸದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ ಮಾಡುವುದಾಗಿಯೂ ಹೇಳಿದ್ದಾಳೆ. ಯುವತಿಯ ದೂರಿನ್ವಯ ರವಿರಾಜ್, ತಂದೆ ಕರಿಯಪ್ಪ, ತಾಯಿ ಈರಮ್ಮ ಮತ್ತು ಆತನ ಚಿಕ್ಕಪ್ಪ ಶಿವಪ್ಪ ವಿರುದ್ಧ ದೂರು ದಾಖಲಾಗಿದೆ.

ಆದರೆ, ಇದೆಲ್ಲ ಆರೋಪವನ್ನು ಯುವಕ ಅಲ್ಲಗಳೆದು ಯುವತಿಯೇ ನನಗೆ ಮತ್ತು ಬರುವ ಪಾನೀಯ ಕುಡಿಸಿ, ತನ್ನಿಂದ ಕೆಟ್ಟ ಕೆಲಸ ಮಾಡಿಸಿ, ವಿಡಿಯೋ ಮಾಡಿಕೊಂಡಿದ್ದಾಳೆ ಎಂದು ಹೇಳಿದ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳ ಭರವಸೆ ಮೇರೆಗೆ ಯುವತಿ ಸುಮಿತ್ರಾ ಧರಣಿ ಹಿಂಪಡೆದಿದ್ದಾಳೆ.