ಸಾರಾಂಶ
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪ್ರಾಪ್ತೆ (17) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಜೇಂದ್ರಗಡ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪ್ರಾಪ್ತೆ (17) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಮೀಪದ ರಾಜೂರ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಜುಲೈ ೭ರಂದು ಕ್ರಿಮಿನಾಶಕ ಸೇವನೆ ಮಾಡಿದ್ದ ಪ್ರೇಮಿಗಳು ಅಸ್ವಸ್ಥಗೊಂಡು ನರಳಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅಪ್ರಾಪ್ತೆ ಮಂಗಳವಾರ ಮಧ್ಯಾಹ್ನ ಕೊನೆ ಉಸಿರೆಳೆದಿದ್ದಾಳೆ. ಯುವಕ ದೇವಪ್ಪ ಹನಮಪ್ಪ ಹಾದಿಮನಿ (೨೭)ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆ ವಿವರ:ಒಂದೇ ಗ್ರಾಮದವರಾಗಿದ್ದ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ೨ ವರ್ಷದ ಬಳಿಕ ತಿಳಿದ ಕುಟುಂಬಸ್ಥರು ಯುವತಿಗೆ ಬುದ್ಧಿ ಹೇಳಿದ್ದಾರೆ. ಗಜೇಂದ್ರಗಡ ಖಾಸಗಿ ಕಾಲೇಜಿಗೆ ಹೋಗಿದ್ದ ಯುವತಿಯನ್ನು ಜು.೭ರಂದು ಮಧ್ಯಾಹ್ನ ೩ ಗಂಟೆ ವೇಳೆಗೆ ಆತ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕೊಡಗಾನೂರ ರಸ್ತೆಯಲ್ಲಿನ ರಾಜೂರ ಗ್ರಾಮದ ಜಮೀನಿನಲ್ಲಿ ಇಬ್ಬರು ಕ್ರಿಮಿನಾಶಕ ಸೇವಿಸಿದ್ದು, ನರಳಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಸೇರಿಸಿದ್ದಾರೆ. ವಿಷಯ ತಿಳಿದು ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪಿದ್ದಾಳೆ.ಈ ಕುರಿತು ಮೃತ ಅಪ್ರಾಪ್ತೆಯ ಕುಟುಂಬಸ್ಥರು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.