ಹುಣಸೆಹಣ್ಣಿಗೆ ನಮೂದಾದ ಕಡಿಮೆ ಬೆಲೆ: ರೊಚ್ಚಿಗೆದ್ದ ರೈತರಿಂದ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ

| Published : Feb 12 2024, 01:34 AM IST

ಹುಣಸೆಹಣ್ಣಿಗೆ ನಮೂದಾದ ಕಡಿಮೆ ಬೆಲೆ: ರೊಚ್ಚಿಗೆದ್ದ ರೈತರಿಂದ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೂಕ ಮತ್ತು ದರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮಾರುಕಟ್ಟೆ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ರೈತರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯದಲ್ಲೇ ಉತ್ತಮ ವಹಿವಾಟುವುಳ್ಳ ಕೆಲವೇ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಚಳ್ಳಕೆರೆ ಮಾರುಕಟ್ಟೆಯೂ ಒಂದಾಗಿದೆ. ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗದಂತಹ ಪ್ರಖ್ಯಾತ ಮಾರುಕಟ್ಟೆಗಳಿಗೆ ಸವಾಲೊಡ್ಡುವಂತೆ ಚಳ್ಳಕೆರೆ ಮಾರುಕಟ್ಟೆ ವ್ಯವಹಾರವಗಳು ಸಹ ಉತ್ತಮವಾಗಿ ನಡೆಯುತ್ತಿದ್ದು, ನೆರೆಯ ಆಂಧ್ರಪ್ರದೇಶವೂ ಸೇರಿ ರಾಜ್ಯದ ನೂರಾರು ಶೇಂಗಾ, ಹುಣಸೆಹಣ್ಣು, ಒಣಮೆಣಸೀನಕಾಯಿ, ಈರುಳ್ಳಿ ಬೆಳೆಯುವ ರೈತರು ಹಾಗೂ ಮಾರಾಟಗಾರರು ಬರುತ್ತಾರೆ.

ಚಳ್ಳಕೆರೆ ಮಾರುಕಟ್ಟೆಯಲ್ಲಿ ಉತ್ತಮ ದರ ಹಾಗೂ ಅಳತೆಯಲ್ಲಿ ಯಾವುದೇ ಮೋಸವಿಲ್ಲವೆಂದು ಬಾವಿಸಿದ ನೂರಾರು ರೈತರು, ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಬೇರೆ ಮಾರುಕಟ್ಟೆಗೆ ಹೊಲಿಸಿದಲ್ಲಿ ಇಲ್ಲಿ ಎಲ್ಲವೂ ಸುಲಭವಾಗುವುದು ಎಂಬ ನಂಬಿಕೆ ಇವರದ್ದು. ಆದರೆ, ಭಾನುವಾರ ಮಾತ್ರ ಚಳ್ಳಕೆರೆ ಮಾರುಕಟ್ಟೆಗೆ ಆಗಮಿಸಿ ರೈತರು ತಾವು ಬೆಳೆದು ತಂದ ಶೇಂಗಾ, ಹುಣಸೆಹಣ್ಣು ದರಗಳಿಗೆ ಬೇರೆ ಮಾರುಕಟ್ಟೆಗಿಂತ ಕಡಿಮೆ ದರ ನಮೂದಿಸಿದ ಹಿನ್ನೆಲೆ ನಮಗೆ ಇಲ್ಲಿನ ಮಾರುಕಟ್ಟೆಯಲ್ಲಿ ದರ ಹಾಗೂ ತೂಕದಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾರುಕಟ್ಟೆಗೆ ಗೇಟ್‌ಗೆ ಬೀಗ ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು.

ಒಮ್ಮಿಂದೊಮ್ಮೆಲೇ ರೈತರು ಹಾಗೂ ಮಾರಾಟಗಾರರು ಮಾರುಕಟ್ಟೆಗೆ ಯಾರೂ ಪ್ರವೇಶ ಮಾಡದಂತೆ ಗೇಟ್ ಮುಂದೆ ಪ್ರತಿಭಟನೆ ನಡೆಸಿದಾಗ ಇಡೀ ವಾತಾವರಣವೇ ಅಯೋಮಯವಾಗಿತ್ತು. ಮಾರುಕಟ್ಟೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ಹುಣಸೆಹಣ್ಣಿನ ದರ ₹೨೦ ಸಾವಿರವಿದೆ. ಇಲ್ಲಿ ₹೧೦ರಿಂದ೧೨ ಸಾವಿರಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದಾಗ ರೈತರ ಅಹಸನೆ ಕಟ್ಟೆ ಒಡೆಯಿತು. ಅತಿಕಡಿಮೆ ಬೆಲೆ ನಮೂದಿಸಿ ಖರೀದಿಸಲು ಮುಂದಾದಾಗ ರೈತರು ಆಕ್ರೋಶಗೊಂಡರು. ನಮ್ಮ ಬೆಳೆಗೆ ಹೆಚ್ಚು ಬೆಲೆ ಬೇರೆ ಮಾರುಕಟ್ಟೆಗಳಲ್ಲಿ ದೊರೆತರೆ, ಇಲ್ಲಿ ಕಡಿಮೆ ದರ ನಮೂದಿಸಲು ಕಾರಣವೇನು, ಇಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿ ಬೀಗಜಡಿದು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದ ಕೂಡಲೇ ಪಿಎಸ್‌ಐ ಕೆ.ಸತೀಶ್‌ ನಾಯ್ಕ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ರೈತರು ಮತ್ತು ಮಾರುಕಟ್ಟೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದೇ ಸಂದರ್ಭದಲ್ಲಿ ಮಾರುಕಟ್ಟೆ ಅಧಿಕಾರಿಗಳು ಸಹ ಗುಣಮಟ್ಟ ನೋಡಿ ದರ ನಿಗದಿಪಡಿಸಲಾಗುತ್ತದೆ. ಇಲ್ಲಿ ಯಾವುದೇ ಅನ್ಯಾಯವಾಗುವುದಿಲ್ಲ ಎಂದರೂ ಸಹ ರೈತರು ತಮ್ಮ ಅಸಮದಾನ ಮುಂದುವರೆಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿತಲ್ಲದೆ, ಗೇಟೆಗೆ ಹಾಕಿದ್ದ ಬೀಗ ತೆರವುಗೊಳಿಸಿದರು.