ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಘಟಪ್ರಭ ನದಿಗೆ ಹೊರಹರಿವು ಕಡಿಮೆಯಾಗಿರುವುದರಿಂದ ನಗರದೊಳಗೆ ನುಗ್ಗಿದ್ದ ನೀರು ಸ್ವಲ್ಪ ಇಳಿಮುಖವಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರು ನಗರದ ಕಾಳಜಿ ಕೇಂದ್ರಗಳಲ್ಲಿಯೇ ಆಶ್ರಯ ಪಡೆದಿದ್ದಾರೆ.ನಗರದಲ್ಲಿ ನುಗ್ಗಿದ ನೀರು ಇಳಿಮುಖವಾಗಿರುವುರಿಂದ ಮಟನ್ ಮಾರ್ಕೆಟ್, ಮೀನು ಮಾರುಕಟ್ಟೆ ಮತ್ತು ಭೋಜಗರ ಗಲ್ಲಿಗಳಲ್ಲಿ ನುಗ್ಗಿದ ನೀರು ಭಾಗಶಃ ಕಡಿಮೆಯಾಗಿದ್ದು, ಆ ಪ್ರದೇಶಗಳ ಜನರು ಅಂಗಡಿ, ಮನೆಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ಕಂಡುಬಂದವು.
ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ:ನಗರದ ಮೀನು ಮಾರುಕಟ್ಟೆಯಲ್ಲಿ ಮಂಗಳವಾರ ಭರ್ಜರಿ ವ್ಯಾಪಾರ ನಡೆಯಿತು. ಹಿಡಕಲ್ ಜಲಾಶಯದಿಂದ ನೀರು ಹರಿಬಿಟ್ಟಿರುವ ಪರಿಣಾಮ ಘಟಪ್ರಭ ನದಿಗೆ ಹರಿದು ಬಂದ ಮೀನುಗಳನ್ನು ಮೀನುಗಾರರು ಹಿಡಕಲ್ ಜಲಾಯಶ ಹತ್ತಿರ ತೆರಳಿ ಬಲೆಗೆ ಕೆಡವಿ ನಗರದಲ್ಲಿ ಭರ್ಜರಿ ವ್ಯಾಪಾರ ನಡೆಸಿದರು. ಮೀನು ಮಾರುಕಟ್ಟೆಗೆ ನೀರು ನುಗ್ಗಿದ್ದರಿಂದ ಮೂರ್ನಾಲ್ಕು ದಿನಗಳಿಂದ ಮೀನು ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು, ನೀರು ತೆರವುಗೊಂಡಿದ್ದರಿಂದ ಮೀನುಗಾರರು ವ್ಯಾಪಾರ ವಹಿವಾಟು ನಡೆಸಿದರು.ನಗರದ ಚಿಕ್ಕೋಳಿ ಮತ್ತು ಲೋಳಸೂರ ಸೇತುವೆಗಳು ಯಥಾಸ್ಥಿತಿಯಲ್ಲಿದ್ದು, ಚಿಕ್ಕೋಳಿ ಸೇತುವೆಯ ಮೇಲೆ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಲೋಳಸೂರ ಸೇತುವೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.