ತಗ್ಗದ ಪ್ರವಾಹ: 2ನೇ ದಿನವೂ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯಲ್ಲಿ ಸಂಚಾರ ಬಂದ್

| Published : Aug 20 2025, 01:30 AM IST

ತಗ್ಗದ ಪ್ರವಾಹ: 2ನೇ ದಿನವೂ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯಲ್ಲಿ ಸಂಚಾರ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ 1ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಟ್ಟ ಕಾರಣ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಗೊಂಡು ಎರಡನೇ ದಿನವೂ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ತುಂಗಭದ್ರಾ ಜಲಾಶಯದಿಂದ ನದಿಗೆ 1ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಟ್ಟ ಕಾರಣ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಗೊಂಡು ಎರಡನೇ ದಿನವೂ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಸೋಮವಾರ ಬೆಳಗ್ಗೆ ಜಲಾಶಯದಿಂದ 80 ಸಾವಿರ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು ಸೇತುವೆ ಸಂಪೂರ್ಣ ಮುಳುಗಡೆಯಾಗದ ಕಾರಣ ನಿರ್ಬಂಧದ ಮಧ್ಯೆಯು ಸೇತುವೆ ಮೇಲಿನ ಸಂಚಾರಕ್ಕೆ ಸಂಜೆವರೆಗೂ ಅನುವು ಕಲ್ಪಿಸಲಾಗಿತ್ತು. ಆದರೆ ರಾತ್ರಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣಕ್ಕೆ ಸೇತುವೆ ಸಂಪೂರ್ಣ ಮುಳುಗಡೆಗೊಂಡು ಸಂಚಾರಕ್ಕೆ ಅಡೆಚಣೆಯಾಗಿದೆ. ಇನ್ನು ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಕಬ್ಬು, ಬಾಳೆ, ಭತ್ತ ಬೆಳೆ ಜಲಾವೃತಗೊಂಡಿದ್ದು ಬೆಳೆ ನಷ್ಟ ಉಂಟಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಕೋಟೆಯಿಂದ ರಾಮಸಾಗರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬನವಾಸಿ ರಸ್ತೆ ಮುಳುಗಡೆಗೊಂಡಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ರೈತರು ನೀರಿನಲ್ಲಿಯೇ ತೆರಳಿ ತಮ್ಮ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಪಂಪಾಪತಿ ದೇವಸ್ಥಾನ ಬಳಿಯ ಉತ್ತರ ಕ್ರಿಯಾಮಂಟಪ, ಹೊಳೆ ಆಂಜನೇಯಸ್ವಾಮಿ, ಮಾಧವ ತೀರ್ಥರ ಬೃಂದಾವನ ಜಲಾವೃತಗೊಂಡಿವೆ.

ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ತೆರೆಯಲು ತಾಲೂಕಾಡಳಿತ ಪೂರ್ವಸಿದ್ಧತೆ ಮಾಡಿಕೊಂಡಿದೆ. ನದಿಗೆ ಇನ್ನಷ್ಟು ಪ್ರಮಾಣದ ನೀರು ಹರಿದು ಬಂದಲ್ಲಿ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಂತರಿಸಲಾಗುವುದು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದ್ದಾರೆ.

ಕೋಟೆ ಆಂಜನೇಯ ಗುಡಿ ಬಳಿ ಸ್ಮಶಾನಕ್ಕೆ ತೆರಳುವ ಹಾದಿಯಲ್ಲಿ ನದಿ ನೀರು ನುಗ್ಗಿದ್ದರಿಂದ ಅಂತ್ಯಕ್ರಿಯೆಗಾಗಿ ಮೃತದೇಹವನ್ನು ತೆಪ್ಪದಲ್ಲಿ ಹಾಕಿಕೊಂಡು ಸ್ಮಶಾನಕ್ಕೆ ತೆರಳಿದ ಘಟನೆ ಸೋಮವಾರ ಜರುಗಿದೆ. ಪ್ರತಿ ಬಾರಿಯು ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಾಗ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಸ್ಮಶಾನಕ್ಕೆ ತೆರಳುವ ಹಾದಿ ಜಲಾವೃತಗೊಂಡು ಶವ ಸಂಸ್ಕಾರಕ್ಕೆ ಅಡಚಣೆ ಉಂಟಾಗುತ್ತದೆ. ಹೀಗಾಗಿ ಪರ್ಯಾಯ ಹಾದಿಯ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಮುಂದಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.