ಸಾರಾಂಶ
ಭಾನುವಾರ ತಡರಾತ್ರಿ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಸುರಿದ ಮಳೆ-ಗಾಳಿಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಗಾಳಿಯ ವೇಗಕ್ಕೆ ಲಕಮಾಜಿಕೊಪ್ಪ ಗ್ರಾಮದಲ್ಲಿ ಮರವೊಂದು ನೆಲಕ್ಕುರುಳಿದ್ದು, ಮನೆಯಲ್ಲಿ ಮಲಗಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯಾಡಗಿ: ಭಾನುವಾರ ತಡರಾತ್ರಿ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಸುರಿದ ಮಳೆ-ಗಾಳಿಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಗಾಳಿಯ ವೇಗಕ್ಕೆ ಲಕಮಾಜಿಕೊಪ್ಪ ಗ್ರಾಮದಲ್ಲಿ ಮರವೊಂದು ನೆಲಕ್ಕುರುಳಿದ್ದು, ಮನೆಯಲ್ಲಿ ಮಲಗಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ 3 ತಿಂಗಳಿನಿಂದ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ತಾಲೂಕಿನ ಜನತೆಗೆ ಕಳೆದ ಎರಡ್ಮೂರು ದಿನದಿಂದ ಸಂಜೆ ಹಾಗೂ ರಾತ್ರಿ ಸುರಿಯುತ್ತಿರುವ ಮಳೆ ತಂಪೆರುತ್ತಿದ್ದರೂ ಸಹ ಜೋರಾದ ಗಾಳಿ, ಸಿಡಿಲು, ಗುಡುಗು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿವೆ.ಭಾನುವಾರ ರಾತ್ರಿಯವರೆಗೂ ಯಾವುದೇ ಮಳೆಯಾಗದಿದ್ದರೂ ಸಹ ತಡರಾತ್ರಿ ಒಂದು ಗಂಟೆಗೆ ಆರಂಭವಾದ ರಣ ಮಳೆ ಸುಮಾರು 3.30ರ ವರೆಗೆ ನಿರಂತರವಾಗಿ ಸುರಿದಿದೆ. ಇದರಿಂದ ಪಟ್ಟಣದಾದ್ಯಂತ ನೀರು ಸಂಗ್ರಹಗೊಂಡು ತಗ್ಗು ಪ್ರದೇಶಗಳು ಜಲಾವೃತಗೊಂಡವು. ಅದರಲ್ಲೂ ಮುಖ್ಯರಸ್ತೆಯಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ನೀರು ಹರಿಯಿತು.
ತಪ್ಪಿದ ಅನಾಹುತ: ಗಾಳಿ-ಮಳೆಗೆ ತಾಲೂಕಿನ ಲಕಮಾಜಿಕೊಪ್ಪ ಗ್ರಾಮದಲ್ಲಿನ ಈರಣ್ಣ ವೀರಯ್ಯ ಚರಂತಿಮಠ ಎಂಬುವರ ಮನೆಯ ಮೇಲೆ ಬೃಹತ್ ಆಲದಮರವೊಂದು ರಾತ್ರಿ 3.30 ಸುಮಾರಿಗೆ ಭಾರಿ ಸದ್ದಿನೊಂದಿಗೆ ಬಿದ್ದಿದೆ. ಮನೆಯ ಹೊರಗೆ ಮಲಗಿದ್ದ ಮೂವರು ದಿಢೀರನೆ ಎದ್ದು ಓಡಿದ್ದಾರೆ. ಮನೆಯ ಹೊರಗೆ ಹಾಕಿದ್ದ ತಗಡು ಮರವನ್ನು ತಡೆ ಹಿಡಿದ ಪರಿಣಾಮ ಭಾರಿ ಅನಾಹುತ ತಪ್ಪಿದಂತಾಗಿದೆ.ಸ್ಥಳಕ್ಕೆ ತಹಶೀಲ್ದಾರ ಭೇಟಿ: ಮನೆಯ ಮೇಲೆ ಮರ ಬಿದ್ದಿರುವ ಸುದ್ದಿ ತಿಳಿದ ಕೂಡಲೇ ಗ್ರಾಮದಕ್ಕೆ ತೆರಳಿದ ತಹಸೀಲ್ದಾರ ರವಿಕುಮಾರ ಕೊರವರ, ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ ಅಕ್ಷರದಾಸೋಹಾಧಿಕಾರಿ ಎನ್.ತಿಮ್ಮಾರೆಡ್ಡಿ, ಪಿಡಿಒ ಪರಿಶೀಲನೆ ನಡೆಸಿದರು.
ಮೆಣಸಿನಕಾಯಿ ಬಚಾವ್: ಭಾನುವಾರ ತಡರಾತ್ರಿ ಏಕಾಎಕಿ ಸುರಿದ ಮಳೆಗೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಕೆಲಕಾಲ ಬೆಚ್ಚಿ ಬೀಳುವಂತಾಯಿತು. ಭಾನುವಾರ ಸಂಜೆ ಮಾರಾಟಕ್ಕೆ ಬಂದಿದ್ದ 23 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ರಾತ್ರಿ ಸಮಯದಲ್ಲಿಯೇ ತಾಡಪಲ್‌ಗಳಿಂದ ಮುಚ್ಚುವಲ್ಲಿ ಕಾರ್ಮಿಕರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.