ಹಾರಂಗಿ ಜಲಾಶಯದ ಕೆಳ ಭಾಗ ಕಮಾನು ಸೇತುವೆ ನಿರ್ಮಾಣ ಯೋಜನೆ

| Published : Jul 18 2025, 12:45 AM IST

ಸಾರಾಂಶ

ಶಾಸಕ ಡಾ. ಮಂತರ್‌ಗೌಡ ನೀಡಿದ ಪ್ರಸ್ತಾವನೆಯನ್ನು ಅಂಗೀಕರಿಸಿ ಸರ್ಕಾರ ಇದೀಗ ಕಮಾನು ಸೇತುವೆಗೆ ಅನುಮೋದನೆ ನೀಡಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯ ಕೆಳಭಾಗದಲ್ಲಿ ನೂತನ ಕಮಾನು ಸೇತುವೆಯನ್ನು 36.50 ಕೋಟಿ ರು. ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ನೀಡಿದ ಪ್ರಸ್ತಾವನೆಯನ್ನು ಅಂಗೀಕರಿಸಿ ಸರ್ಕಾರ ಇದೀಗ ಕಮಾನು ಸೇತುವೆಗೆ ಅನುಮೋದನೆ ನೀಡಿದೆ.

ಕುಶಾಲನಗರದ ಹುಲುಗುಂದ ಗ್ರಾಮದ ಬಳಿ ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಹಾರಂಗಿ ಜಲಾಶಯದ ತುಂಬಿದ ಸಂದರ್ಭ ಸೇತುವೆ ಮುಳುಗಡೆಯಾಗುತ್ತಿತ್ತು. ಇದೀಗ ನೂತನ ಸೇತುವೆ ನಿರ್ಮಾಣ ಆಗುವುದರಿಂದ ಸಾಕಷ್ಟು ರೀತಿಯಲ್ಲಿ ಪ್ರಯೋಜನವಾಗಲಿದ್ದು, ಹಾರಂಗಿಯ ಸೌಂದರ್ಯ ವೃದ್ಧಿಸುವುದಲ್ಲದೇ ಈಗ ಜಲಾಶಯದ ಮುಂಬದಿಯಲ್ಲಿನ ಅಪಾಯಕಾರಿ ಪರಿಸ್ಥಿತಿ ನಿವಾರಣೆಯಾಗಲಿದೆ.

ಮುಳುಗುವ ಸೇತುವೆ:

ಪ್ರತಿ ಬಾರಿ ಕೂಡ ಹಾರಂಗಿ ಜಲಾಶಯದಿಂದ ನೀರನ್ನು ಬಿಡುವ ಸಂದರ್ಭ ಮುಂಭಾಗದ ಸೇತುವೆ ಮುಳುಗಡೆಯಾಗುತ್ತಿದ್ದು, ಇದಕ್ಕೆ ತಡೆಗೋಡೆ ಇಲ್ಲದ ಕಾರಣ ಪ್ರವಾಸಿಗರು ಹಾಗೂ ಗ್ರಾಮಸ್ಥರು ಅತ್ಯಂತ ಅಪಾಯದ ಸ್ಥಿತಿಯಲ್ಲೇ ಸಂಚರಿಸುವಂತಾಗಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್‌ ಹಾಕಿದ್ದರೂ, ಕೆಲವೊಮ್ಮೆ ಅವರ ಕಣ್ಣು ತಪ್ಪಿಸಿ ಜನರು ಸೇತುವೆ ಮೇಲೆ ಓಡಾಡುತ್ತಾರೆ. ಕೆಲವು ಪ್ರವಾಸಿಗರು ಮೋಜಿನಲ್ಲಿ ತೊಡಗುವುದು ಅಪಾಯಕಾರಿಯಾಗಿದೆ.

ಸಂಚಾರಕ್ಕೆ ತೊಂದರೆ:

ಜಲಾಶಯದಿಂದ ನೀರು ಬಿಟ್ಟ ಸಂದರ್ಭ ಸೇತುವೆ ಮುಳುಗಿದ್ದರಿಂದ ಹಾರಂಗಿ ಸೇರಿದಂತೆ ಸಮೀಪದ ಹುದುಗೂರು, ಯಡವನಾಡು, ಮತ್ತಿತರ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆ ಹಲವು ವರ್ಷಗಳಿಂದ ಕಂಡುಬರುತ್ತಿದ್ದರೂ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಇದೀಗ ಈ ನೂತನ ಸೇತುವೆ ಹಲವರಿಗೆ ಉಪಯೋಗ ಆಗಲಿದೆ.

ಶಿಥಿಲಾವಸ್ಥೆಯ ಸೇತುವೆ:

ಜಲಾಶಯದಿಂದ ನೀರನ್ನು ಹೊರಬಿಟ್ಟ ಸಂದರ್ಭ ಸೇತುವೆ ಬಹುತೇಕ ನೀರಿನಿಂದ ಆವೃತಗೊಳ್ಳುವುದು ಸಾಮಾನ್ಯ. ನೀರಿನ ವೇಗಕ್ಕೆ ಕಾಲ್ನಡಿಗೆಯಲ್ಲಿ, ದ್ವಿಚಕ್ರ ವಾಹನಗಳಲ್ಲಿ ತೆರಳುವವರಿಗೆ ಅಪಾಯ ಕಾದಿದೆ. ಜಲಾಶಯದ 4 ಕ್ರಸ್ಟ್‌ಗೇಟ್‌ಗಳ ಮೂಲಕ ಹೊರಬಿಟ್ಟ ಅಪಾರ ಪ್ರಮಾಣದ ನೀರು ಹಲವು ಬಾರಿ ಸೇತುವೆಯನ್ನು ಮುಳುಗಿಸಿದೆ. ಕಳೆದ 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಸೇತುವೆ ಬಹುತೇಕ ಶಿಥಿಲಾವಸ್ಥೆಯಲ್ಲಿದೆ. ಈ ಹಿಂದೆ ಸುಮಾರು 20 ಸಾವಿರ ಕ್ಯೂಸೆಕ್‌ ಪ್ರಮಾಣದ ನೀರು ಬಿಟ್ಟ ಸಂದರ್ಭ ಸೇತುವೆಯ ಮೇಲ್ಪದರ ಕೊಚ್ಚಿಹೋಗಿದೆ. ಜಲಾಶಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರೂ ಅಪಾಯವನ್ನು ಲೆಕ್ಕಿಸದೆ ನೀರು ಹರಿಯುವ ಸೇತುವೆ ಮೇಲೆ ನಡೆದಾಡುವುದು ಆತಂಕ ಸೃಷ್ಟಿಸಿದೆ. ಸೇತುವೆ ಮೇಲೆ ನೀರು ಹೆಚ್ಚಾದ ಸಂದರ್ಭ ಸಂಪರ್ಕ ಕಡಿತಗೊಳ್ಳುತ್ತಿದ್ದು, 15 ಕಿ.ಮೀ. ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ.

ಸೇತುವೆ ಬಗ್ಗೆ ಮನವರಿಕೆ:

ಹಾರಂಗಿ ಜಲಾಶಯಕ್ಕೆ ಸೇತುವೆ ನಿರ್ಮಿಸುವಂತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವೀಡಿಯೋ ಕಾಲ್ ಮಾಡಿ ಇಲ್ಲಿನ ವಾಸ್ತವತೆಯನ್ನು ತೋರಿ ಮನವಿ ಮಾಡಿದ್ದರು. ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗುವ ಭೀತಿಯಿಂದ ನೂತನ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಸೇತುವೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಮನವಿ ಮಾಡಿದ್ದರು.

ಪ್ರವಾಸಿಗರಿಗೆ ಆಕರ್ಷಣೆ, ಗ್ರಾಮಸ್ಥರಿಗೆ ಅನುಕೂಲ!

ಹಾರಂಗಿಯಲ್ಲಿ ಆದಷ್ಟು ಬೇಗ ನೂತನ ಕಮಾನು ಸೇತುವೆ ನಿರ್ಮಾಣವಾದಲ್ಲಿ ಮಳೆಗಾಲದಲ್ಲಿ ಹಾರಂಗಿ ಜಲಾಶಯದ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಹಾರಂಗಿ ಜಲಾಶಯದಿಂದ ನೀರು ಹರಿದರೂ ಕೂಡ ಈ ನೂತನ ಸೇತುವೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಗ್ರಾಮಸ್ಥರು ಸಂಚರಿಸಬಹುದಾಗಿದೆ. ಇದೀಗ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಮುಂದಿನ ವರ್ಷ ಬೇಸಗೆಯಲ್ಲಿ ಈ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಮೂಡಿದೆ. ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಕಮಾನು ಸೇತುವೆಯನ್ನು 36.50 ಕೋಟಿ ರು. ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಇದರಿಂದ ಸಾಕಷ್ಟು ರೀತಿಯಲ್ಲಿ ಪ್ರಯೋಜನವಾಗಲಿದ್ದು, ಹಾರಂಗಿಯ ಸೌಂದರ್ಯ ವೃದ್ಧಿಸುವುದಲ್ಲದೇ ಈಗ ಜಲಾಶಯದ ಮುಂಬದಿಯಲ್ಲಿನ ಅಪಾಯಕಾರಿ ಪರಿಸ್ಥಿತಿ ನಿವಾರಣೆಯಾಗಲಿದೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಈ ಯೋಜನೆ ಅನುಮೋದನೆ ನೀಡಿದ್ದಾರೆ.

। ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ