ಪೆನ್‌ ಡ್ರೈವ್‌ ಕೇಸಲ್ಲಿ ನನ್ನ ಪಾತ್ರವಿಲ್ಲ: ಎಲ್‌ಆರ್‌ಎಸ್‌

| Published : May 07 2024, 02:00 AM IST / Updated: May 07 2024, 12:16 PM IST

LR Shivaramegowda

ಸಾರಾಂಶ

ಪೆನ್‌ಡ್ರೈವ್‌ ಕೇಸಲ್ಲಿ ನನ್ನ ಪಾತ್ರವಿಲ್ಲ ಎಂಬುದಾಗಿ ಮಾಜಿ ಸಂಸದ ಎಲ್‌ ಆರ್‌ ಶಿವರಾಮೇಗೌಡ ತಿಳಿಸಿದ್ದಾರೆ.

ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡ ಒಬ್ಬ ಬ್ಲ್ಯಾಕ್‌ ಮೇಲರ್‌. ಹಾಸನದ ಪೆನ್‌ ಡ್ರೈವ್‌ ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪಾತ್ರವೂ ಇಲ್ಲ ಎಂದು ಮಾಜಿ ಸಂಸದ ಶಿವರಾಮೇಗೌಡ ತಿರುಗೇಟು ನೀಡಿದ್ದಾರೆ.

ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಒಬ್ಬ ಬ್ಲ್ಯಾಕ್‌ ಮೇಲರ್‌, ದುಡ್ಡು ಕಾಸಿಗಾಗಿ ನಮ್ಮ ಹತ್ತಿರ ಬಂದಿದ್ದ ಎನಿಸುತ್ತದೆ. ಅವನ ಬಳಿ ಏನಿದೆ ಬೇಕಿದ್ದರೆ ಅದನ್ನು ಬಿಡುಗಡೆಗೊಳಿಸಲಿ. 

ನಾನು ಯಾವುದೇ ಆಮಿಷ ಒಡ್ಡಿಲ್ಲ. ಪೆನ್‌ಡ್ರೈವ್‌ ಮಹಾನಾಯಕರು ಬಿಜೆಪಿಯವರು ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೇ. ದೇವರಾಜೇಗೌಡನ ಜೊತೆ ಶಿವಕುಮಾರ್ ಒಂದು ನಿಮಿಷ ಸಹ ಮಾತನಾಡಿಲ್ಲ. ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ, ಶಿವಕುಮಾರ್ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೇವರಾಜೇಗೌಡನೇ ನಮ್ಮ ಹತ್ತಿರ ಬಂದು ಶಿವಕುಮಾರ್ ಭೇಟಿ ಮಾಡಿಸು ಎಂದು ಒತ್ತಾಯ ಮಾಡಿದ್ದ. ಅದಕ್ಕಾಗಿ ನಾನೇ ಶಿವಕುಮಾರ್‌ ಜೊತೆ ಒಂದು ನಿಮಿಷ ಮಾತ‌ನಾಡಿಸಿದ್ದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ದೇವರಾಜೇಗೌಡನೇ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಹೇಳಿದರು.