ಸಾರಾಂಶ
ಇವತ್ತಿನ ರಾಜಕಾರಣಿಗಳಿಗೆ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರು ಆದರ್ಶರಾಗಿದ್ದಾರೆ. ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ, ಅವರ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನ ನಡೆಸಿರುವುದು ಕೂಡ ಅನುಕರಣೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಾಗರ
ಇವತ್ತಿನ ರಾಜಕಾರಣಿಗಳಿಗೆ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರು ಆದರ್ಶರಾಗಿದ್ದಾರೆ. ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ, ಅವರ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನ ನಡೆಸಿರುವುದು ಕೂಡ ಅನುಕರಣೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಮಡಸೂರು ಲಿಂಗದಹಳ್ಳಿಯ ಗಂಗಾ ಪರಮೇಶ್ವರಿ ಸೇವಾ ಪ್ರತಿಷ್ಠಾನ ನೇತೃತ್ವದಲ್ಲಿ ನಿರ್ಮಾಣವಾದ ಎಲ್.ಟಿ.ತಿಮ್ಮಪ್ಪ ಹೆಗಡೆ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರಿಗೆ ಸುಸಜ್ಜಿತ ಕಲ್ಯಾಣ ಮಂಟಪದ ಅಗತ್ಯವಿರುವುದು ಈವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪದ ಬೇಡಿಕೆಗೆ ಸಕಾರಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಎಲ್.ಟಿ. ಹೆಗಡೆ ಅವರು ದೂರಗಾಮಿ ಚಿಂತನೆಗಳನ್ನು ಒಳಗೊಂಡವರಾಗಿದ್ದರು. ಸಹಕಾರಿ ಕ್ಷೇತ್ರದ ಮೂಲಕ ರೈತ ಸಮುದಾಯಕ್ಕೆ ಬೇಕಾದ ಸೌಕರ್ಯಗಳನ್ನು ರೂಪಿಸುವಲ್ಲಿ ಅವರ ಪಾತ್ರ ಹಿರಿದು.
ಹಲವು ಸಂದರ್ಭಗಳಲ್ಲಿ ಅವರು ರಾಜ್ಯಮಟ್ಟದ ನಾಯಕರ ಸೌಹಾರ್ದ ಸಂಬಂಧಗಳನ್ನು ಬಳಸಿಕೊಂಡು ಜನಪರ ನೀತಿ ನಿರೂಪಣೆಯಲ್ಲಿಯೂ ಪ್ರಭಾವ ಬೀರಿದವರು. ಇವೆಲ್ಲವುಗಳ ನಡುವೆ ತಮ್ಮೂರಿನ ದೇವಸ್ಥಾನ, ಶಾಲೆ ಮೊದಲಾದವುಗಳ ಬಗ್ಗೆ ಕೂಡ ಅವರ ಆಸಕ್ತಿ, ಪಾಲ್ಗೊಳ್ಳುವಿಕೆ ಇತ್ತು ಎಂಬುದು ಅಚ್ಚರಿ ಮೂಡಿಸುತ್ತದೆ ಎಂದು ಹೇಳಿದರು.
ಸಭಾಭವನ ನಿರ್ಮಾಣದಲ್ಲಿ ಶ್ರಮಿಸಿದ ಅಶ್ವಥನಾರಾಯಣ ಶಶಿಕಲಾ ಹಾಗೂ ವಿಶ್ವನಾಥ ಪಟೇಲ್ ವಿದ್ಯಾ ದಂಪತಿಯನ್ನು ಸನ್ಮಾನಿಸಲಾಯಿತು. ಸಾವಯವ ಮಿಷನ್ನ ಮಾಜಿ ಅಧ್ಯಕ್ಷ ಅ.ಶ್ರೀ.ಆನಂದ್, ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಅಡಕೆ ವರ್ತಕರ ಸಂಘದ ಎಂ.ವಿ. ಮೋಹನ್, ಕುಮಾರಗೌಡ, ಯು.ಎಚ್. ರಾಮಪ್ಪ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಗಂಗಾ ಪರಮೇಶ್ವರಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಲಕ್ಷ್ಮೀ ಕಾನಗೋಡು ನಿರೂಪಿಸಿ, ಭಾಗ್ಯ ವೆಂಕಟೇಶ್ ವಂದಿಸಿದರು.