ಮೇಲ್ಮನೆ ಪ್ರವೇಶಿಸುವ ಅದೃಷ್ಟಶಾಲಿ ಆಯ್ಕೆ ಇಂದು

| Published : Oct 21 2024, 12:46 AM IST / Updated: Oct 21 2024, 12:47 AM IST

ಮೇಲ್ಮನೆ ಪ್ರವೇಶಿಸುವ ಅದೃಷ್ಟಶಾಲಿ ಆಯ್ಕೆ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಮತದಾರರಾಗಿರುವ ಈ ಚುನಾವಣೆಯ ಕಣದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ವಿಧಾನ ಪರಿಷತ್‌ ಉಪಚುನಾವಣೆಯ ಮತದಾನ ಸೋಮವಾರ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಮತದಾರರಾಗಿರುವ ಈ ಚುನಾವಣೆಯ ಕಣದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದಾರೆ.

ಬಿಜೆಪಿಯಿಂದ ಕಿಶೋರ್ ಕುಮಾರ್‌ ಪುತ್ತೂರು, ಕಾಂಗ್ರೆಸ್‌ನಿಂದ ರಾಜು ಪೂಜಾರಿ, ಎಸ್‌ಡಿಪಿಐನಿಂದ ಅನ್ವರ್ ಸಾದತ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ದಿನಕರ್ ಉಳ್ಳಾಲ್ ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಮೇಲ್ಮನೆಗೆ ಪ್ರವೇಶಿಸುವ ಅದೃಷ್ಟಶಾಲಿ ಯಾರು ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

ಮಂಗಳೂರಿನ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಅ.24ರಂದು ಮತ ಎಣಿಕೆ ನಡೆಯಲಿದೆ.

ಸರ್ವ ಸಿದ್ಧತೆ:

ಉಪಚುನಾವಣೆ ಸುಗಮವಾಗಿ ನಡೆಯಲು ಪೂರಕ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

ಎಲ್ಲ ತಾಲೂಕು ಕೇಂದ್ರಗಳಲ್ಲಿ ಭಾನುವಾರ ಮಸ್ಟರಿಂಗ್ ಪ್ರಕ್ರಿಯೆ ನಡೆದಿದ್ದು, ಮತಗಟ್ಟೆ ಅಧಿಕಾರಿಗಳು ಮತ ಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳಿದರು. ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

6032 ಮತದಾರರು:

ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6,032 ಮತದಾರರಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,552 ಹಾಗೂ ಉಡುಪಿ ಜಿಲ್ಲೆಯಲ್ಲಿ 2,480 ಮತದಾರರಿದ್ದಾರೆ. 53 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಮತ್ತು ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 20ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ.

ಮತದಾರರ ವಿಂಗಡಣೆ:

ದಕ್ಷಿಣ ಕನ್ನಡ ಜಿಲ್ಲೆಯ 223 ಗ್ರಾ.ಪಂ.ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 65 ಸದಸ್ಯರು, ಎರಡು ನಗರ ಸಭೆಗಳಲ್ಲಿ 64, ಮೂರು ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯ್ತಿಗಳಲ್ಲಿ 86 ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ 153 ಗ್ರಾಮ ಪಂಚಾಯ್ತಿಗಳ 2,355 ಸದಸ್ಯರು, ಉಡುಪಿ ನಗರ ಸಭೆಯ 36, ಮೂರು ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯ್ತಿಯ 17 ಸದಸ್ಯರು ಮತದಾರರಾಗಿದ್ದಾರೆ.

ಬಿಗಿ ಭದ್ರತೆ:

ಭದ್ರತೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 540 ಮತ್ತು ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಸೆಕ್ಷನ್ 163 ಅನ್ವಯ ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮತಗಟ್ಟೆಗಳಿಗೆ ಮೊಬೈಲ್ ಫೋನ್‌ ಒಯ್ಯುವುದನ್ನು ನಿಷೇಧಿಸಲಾಗಿದೆ.

---------------

ಪರಿಷತ್‌ ಉಪ ಚುನಾವಣೆ: ಮತದಾನ ಅವಕಾಶ ವಂಚಿತ ಇಬ್ಬರು ಶಾಸಕರು!

ಕನ್ನಡಪ್ರಭ ವಾರ್ತೆ ಮಂಗಳೂರುಅವಿಭಜಿತ ದ.ಕ.ಜಿಲ್ಲೆಯಲ್ಲಿ ಅ.21ರಂದು ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಈ ಬಾರಿ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಮತದಾನದಿಂದ ವಂಚಿತಗೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರಿಗೆ ಮತದಾನದ ಅವಕಾಶವಿಲ್ಲ.

ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸಿದರೆ ಮಾತ್ರ ಪರಿಷತ್ ಚುನಾವಣೆಗೆ ಮತದಾನ ಅವಕಾಶ ಪಡೆಯುತ್ತಾರೆ. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಬೆಳ್ತಂಗಡಿ ಗ್ರಾಮಾಂತರ ಪ್ರದೇಶದ ಮತದಾರರಾಗಿರುವ ಕಾರಣ ಬೆಳ್ತಂಗಡಿ ಪಟ್ಟಣ ಪಂಚಾಯಿತಿಯನ್ನು ಪ್ರತಿನಿಧಿಸುತ್ತಿಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಅಲ್ಲಿ ಚುನಾವಣೆ ನಡೆದಿಲ್ಲ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೂ ಚುನಾವಣೆಯಾಗಿಲ್ಲ. ಹಾಗಾಗಿ ಶಾಸಕ ಗುರುರಾಜ್ ಗಂಟಿಹೊಳೆ ಸದ್ಯ ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ಹಾಗಾಗಿ ಇವರಿಬ್ಬರು ಹೆಸರು ಸ್ಥಳೀಯಾಡಳಿತ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಇಲ್ಲ.ಪಾಲಿಕೆಯಲ್ಲಿ ಗರಿಷ್ಠ ಮತದಾರರು: ಅವಿಭಜಿತ ದ.ಕ. ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಮಂಗಳೂರು ಪಾಲಿಕೆಯಲ್ಲಿ ಗರಿಷ್ಠ ಮತದಾರರಿದ್ದಾರೆ. ಒಟ್ಟು 60 ಕಾರ್ಪೋರೇಟರ್‌ಗಳು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಸೇರಿ ಒಟ್ಟು 65 ಮಂದಿ ಇಲ್ಲಿ ಮತ ಚಲಾಯಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮತದಾರ ಪಟ್ಟಿಯಲ್ಲಿ ನಮೂದಿಸಲಾಗಿದೆ.

ಮತಗಟ್ಟೆ ಆಯ್ಕೆ ಅವಕಾಶ:ಇಬ್ಬರು ಸಂಸದರು, 12 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿದೆ. ಶಾಸಕರ ಹೆಸರು ಆಯಾ ತಾಲೂಕಿನ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸಂಸದರು ತಾವು ಮತ ಚಲಾಯಿಸಲು ಆಯ್ಕೆ ಮಾಡುವ ಮತಗಟ್ಟೆಯನ್ನು ತಿಳಿಸಲು ಅವಕಾಶವಿದೆ. ಶಾಸಕರ ಕ್ಷೇತ್ರದಲ್ಲೂ ಒಂದಕ್ಕಿಂತ ಹೆಚ್ಚು ನಗರ ಸ್ಥಳೀಯಾಡಳಿತ ಸಂಸ್ಥೆ ಇದ್ದರೆ ಮತಗಟ್ಟೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟು 33 ಸ್ಥಾನಗಳು ಖಾಲಿದ.ಕ.ಜಿಲ್ಲೆಯಲ್ಲಿ 1 ಪುರಸಭಾ ಸ್ಥಾನ ಹಾಗೂ 28 ಗ್ರಾ.ಪಂ. ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಗ್ರಾ.ಪಂ. ಸ್ಥಾನ ವಿವಿಧ ಕಾರಣಗಳಿಂದ ಖಾಲಿ ಇದೆ. ಜಿಪಂ, ತಾ.ಪಂ. ಚುನಾವಣೆ ನಡೆಯದ ಕಾರಣ ಸುಮಾರು 276 ಮತಗಳು ಕಡಿಮೆಯಾಗಿವೆ. ಕಡಬ, ಬಜ್ಪೆ, ಕಿನ್ನಿಗೋಳಿ ಮತ್ತು ಬೈಂದೂರು ಪಟ್ಟಣ ಪಂಚಾಯಿತಿ ಆಗಿ ಘೋಷಣೆಯಾಗಿದ್ದರೂ ಚುನಾವಣೆ ನಡೆದಿಲ್ಲ.