ಯಾದಗಿರಿಯಲ್ಲಿ ಕೈಗಾರಿಕೆಗೆ ಭೂಮಿ ನೀಡಿದವರಿಗೆ ಗುಳೇ ಭಾಗ್ಯ!

| Published : Jul 28 2025, 12:30 AM IST

ಸಾರಾಂಶ

ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿ, ಫಲವತ್ತಾದ ಕೃಷಿ ಜಮೀನುಗಳನ್ನು ಇದಕ್ಕೆಂದು ಸ್ವಾಧೀನಪಡಿಸಿಕೊಳ್ಳುವ ಸರ್ಕಾರಗಳು, ನಂತರದಲ್ಲಿ ಜನರಿಗೆ/ರೈತರಿಗೆ ನೀಡಿದ್ದ ಭರವಸೆಗಳನ್ನು ಮರೆತೇ ಹೋಗುತ್ತಾರೆ. ಉದ್ಯೋಗ ಸೃಷ್ಟಿ, ಆರೋಗ್ಯ ಭಾಗ್ಯ, ಪಿಂಚಣಿ, ಮಕ್ಕಳಿಗೆ ಶಿಕ್ಷಣ ಎಂದೆಲ್ಲಾ ಕನಸುಗಳು ಕಂಡ ಭೂಸಂತ್ರಸ್ತರು ನಂತರದಲ್ಲಿ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗುತ್ತದೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿ, ಫಲವತ್ತಾದ ಕೃಷಿ ಜಮೀನುಗಳನ್ನು ಇದಕ್ಕೆಂದು ಸ್ವಾಧೀನಪಡಿಸಿಕೊಳ್ಳುವ ಸರ್ಕಾರಗಳು, ನಂತರದಲ್ಲಿ ಜನರಿಗೆ/ರೈತರಿಗೆ ನೀಡಿದ್ದ ಭರವಸೆಗಳನ್ನು ಮರೆತೇ ಹೋಗುತ್ತಾರೆ. ಉದ್ಯೋಗ ಸೃಷ್ಟಿ, ಆರೋಗ್ಯ ಭಾಗ್ಯ, ಪಿಂಚಣಿ, ಮಕ್ಕಳಿಗೆ ಶಿಕ್ಷಣ ಎಂದೆಲ್ಲಾ ಕನಸುಗಳು ಕಂಡ ಭೂಸಂತ್ರಸ್ತರು ನಂತರದಲ್ಲಿ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗುತ್ತದೆ.

ಇತ್ತ ಕೃಷಿಗೆ ಜಮೀನುಗಳೂ ಇರದೆ, ಉದ್ಯೋಗವೂ ಸಿಗದೆ ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಳ್ಳಲು ಮಹಾನಗರಗಳಿಗೆ ಗುಳೇ ಹೋಗುತ್ತಾರೆ. ಇಂಡಸ್ಟ್ರಿಯಲ್‌ ಫ್ರೆಂಡ್ಲೀ ಅಂದನ್ನಿಕೊಳ್ಳುವ ಸರ್ಕಾರಗಳು, ಜನರ ಗುಳೇ ಭಾಗ್ಯಕ್ಕೂ ಕಾರಣವಾಗುತ್ತಾರೆ ಎಂಬ ಆಕ್ರೋಶ ಇಲ್ಲಿನವರದ್ದು.

ಹಿಂದುಳಿದ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪಿಸಿ, ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡುವ ಸರ್ಕಾರಗಳು, ಭೂಮಿ ನೀಡದಿದ್ದರೆ ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ಹೋಗಿ ನಮ್ಮಲ್ಲಿ ಉದ್ಯೋಗ ಸೃಷ್ಟಿಗೆ ಅಡ್ಡಿಯಾಗುತ್ತದೆ ಎಂದೆಲ್ಲಾ ಭಾಷಣ ಬಿಗಿಯುತ್ತಾರೆ. ಭೂಸ್ವಾಧೀನ ನಂತರ, ನಮ್ಮ ಈ ಭಾಗದಲ್ಲಿ ಅಪಾಯಕಾರಿ ರಾಸಾಯನಿಕ ಕೆಮಿಕಲ್‌ ಕಾರ್ಖಾನೆಗಳ ಸ್ಥಾಪಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡುತ್ತವೆ. ಚೆನ್ನಾಗಿರುವ ಉದ್ಯಮಗಳು ಬೆಂಗಳೂರು ಮುಂತಾದ ಭಾಗಕ್ಕೆ ಬೇಕು, ಇಲ್ಲಿ ಕೆಟ್ಟ ಕೆಮಿಕಲ್ ಕಾರ್ಖಾನೆಗಳ ಸ್ಥಾಪಿಸುತ್ತಾರೆ. ಹೀಗಾದರೆ, ನಮ್ಮ ಭಾಗ ಮುಂದುವರಿಯುವುದು ಹೇಗೆ ಎಂಬುದು ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರು ಅಂಬೋಣ.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಕಂಪನಿಗಳಿಂದ ಇಲ್ಲಿನ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಭೂಸ್ವಾಧೀನ ವೇಳೆಯಲ್ಲಿ ರೈತರಿಗೆ ನೀಡಿದ ಒಂದು ಭರವಸೆಯನ್ನು ಕೂಡ ಇಲ್ಲಿಯವರೆಗೆ ಸರ್ಕಾರವಾಗಲಿ, ಇಲ್ಲಿನ ಉದ್ಯಮಿದಾರರಾಗಲೀ ಈಡೇರಿಸಿಲ್ಲ. ಇದಕ್ಕೆಲ್ಲ ಕಾರಣ, ಇಲ್ಲಿನ ಜನರ ಬಗ್ಗೆ ಇರುವ ಸರ್ಕಾರದ ನಿರ್ಲಕ್ಷ್ಯ ಧೋರಣೆ. ಇದರಿಂದಾಗಿ ಇಲ್ಲಿನ ಕೈಗಾರಿಕೆಗಳು ಪರಿಸರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿವೆ. ಇಲ್ಲಿರುವ 27 ಕಂಪನಿಗಳೇ ನಮ್ಮನ್ನು ಉಸಿರಾಡಲು ಬಿಡುತ್ತಿಲ್ಲ, ಇನ್ನೂ 34 ಕಂಪನಿಗಳು ಬರುತ್ತವೆ ಎಂಬ ಸರ್ಕಾರದ ಹೇಳಿಕೆಗಳು ಆಘಾತ ಮೂಡಿಸುತ್ತಿವೆ. ಅವೂ ಬಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ವಾಸಿಸಲೂ ಆಗುವುದಿಲ್ಲ. ಸರ್ಕಾರವೆಂದರೆ ಜನರ ನೋವು-ನಲಿವುಗಳನ್ನು ಸ್ಪಂದಿಸುವುದರ ಜತೆಗೆ ಮನುಷ್ಯನ ಹಕ್ಕುಗಳನ್ನು ರಕ್ಷಿಸುವುದಕ್ಕೆ ಎಂದುಕೊಂಡಿದ್ದೇವೆ. ಆದರೆ, ಇಲ್ಲಿ ನಮ್ಮ ಸಂವಿಧಾನಬದ್ಧ ಬದುಕುವ ಹಕ್ಕುಗಳನ್ನೇ ಸರ್ಕಾರ ಮತ್ತು ಕೈಗಾರಿಕೆಗಳು ಕಸಿದುಕೊಳ್ಳುತ್ತಿವೆ.

ನಾಗರೆಡ್ಡಿ ಪಾಟೀಲ್, ಕಣೇಕಲ್

ಈ ಕೈಗಾರಿಕಾ ಪ್ರದೇಶಕ್ಕೆ ನಮ್ಮ ಭೂಮಿಯನ್ನು ನೀಡುವಾಗ ಜವಳಿ, ಥರ್ಮಲ್ ಸೇರಿದಂತೆ ಕೋಕಾ-ಕೋಲಾದಂತಹ ಬೃಹತ್‌ ಸಾರ್ವಜನಿಕ ಸೌಮ್ಯದ ಕಂಪನಿಗಳು ಬರುತ್ತವೆ, ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಉದ್ಯೋಗ ನೀಡುತ್ತೇವೆ, ವಾರ್ಷಿಕ ವೇತನವನ್ನು ಕೋಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ನಾವುಗಳು ಭೂಮಿ ನೀಡಿದ್ದೇವೆ. ಆದರೆ, ಇಂದು ಅವು ತಿರುಗು ಮುರುಗಾಗಿವೆ. ಕೈಗಾರಿಕಾ ಸುತ್ತಮುತ್ತಲಿನಲ್ಲಿರುವ ಗ್ರಾಮಗಳಿಗೆ ದುರ್ನಾತ ಬೀರುತ್ತಿರುವ ರಾಸಾಯನಿಕ ಕಂಪನಿಗಳನ್ನು ಸ್ಥಾಪಿಸಲು ಅವಕಾಶ ನೀಡಿ, ಭೂಮಿ ಕಳೆದುಕೊಂಡ ರೈತರಿಗೆ ಗ್ರಾಮಗಳನ್ನು ತೊರೆಯುವ ಭಾಗ್ಯ ಸರ್ಕಾರಗಳು ನೀಡುತ್ತಿವೆ. ಇಂದು ನಾವು ಕಲಬುರಗಿಯಲ್ಲಿ ಬೇರೆಯವರ ಹತ್ತಿರ ನೌಕರಿ ಮಾಡುತ್ತ ಜೀವಿಸುತ್ತಿದ್ದೇವೆ, ಒಂದು ವೇಳೆ ನೌಕರಿ ಬಿಟ್ಟರೆ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಿ ಕಷ್ಟನೋ ಸುಖನೋ ಜೀವನ ಸಾಗಿಸುತ್ತಿದ್ದೆವು. ಆದರೆ, ಇಂದು ಈ ದುರ್ನಾತ ಬೀರುವ ರಾಸಾಯನಿಕ ಕಂಪನಿಗಳಿಂದಾಗಿ ನಮ್ಮೂರಿಗೆ ನಾವು ಬರುವುದಕ್ಕೆ ಭಯವಾಗುತ್ತಿದೆ.

ಭೀಮಣ್ಣ ಪೂಜಾರಿ ಕಡೇಚೂರು, ಸಿವಿಲ್ ಎಂಜಿನಿಯರ್, ಕಲಬುರಗಿ.