- ವಾರದ ಹಿಂದೆ ಅದ್ಧೂರಿ ಜಾತ್ರೆ: ದರ್ಶನಕ್ಕೆ ಬಂದ ಭಕ್ತರಿಗೆ ನಿರಾಸೆ

- ಗ್ರಹಣ ಬಳಿಕ ದೇವಳ ಶುಚಿಗೊಳಿಸಿ, ಜಲಾಭಿಷೇಕ, ಪೂಜೆ, ದರ್ಶನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅದ್ಧೂರಿ ಜಾತ್ರೆಯ ದರ್ಶನ ನೀಡುತ್ತಿದ್ದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸೇರಿದಂತೆ ನಗರ, ಜಿಲ್ಲೆಯ ಅನೇಕ ದೇವಸ್ಥಾನಗಳು, ಮಠಗಳು ಮಂಗಳವಾರ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ಬಾಗಿಲು ಮುಚ್ಚಿದ್ದರೆ, ಮತ್ತೆ ಕೆಲವು ಕಡೆ ಗ್ರಹಣದ ವೇಳೆ ಯಾವುದೇ ಪೂಜೆ, ಆರತಿ, ಅಭಿಷೇಕವಿಲ್ಲದೇ ಭಕ್ತರಿಗೆ ದೇವರ ದರ್ಶನಕ್ಕಷ್ಟೇ ಅವಕಾಶ ನೀಡಲಾಗಿತ್ತು.


ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ನಡೆದು ವಾರ ಕಳೆದಿಲ್ಲ. ಇಂದಿಗೂ ಸಾಲುಗಟ್ಟಿ ದುಗ್ಗಮ್ಮನ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಪರ ಊರಿನಿಂದ ಬಂದ ಬಂಧು-ಬಳಗದವರು, ಸ್ಥಳೀಯ ಭಕ್ತಾದಿಗಳು ಮಂಗಳವಾರ ಹಾಗೂ ಜಾತ್ರೆಯಿಂದಾಗಿ ಮತ್ತಷ್ಟು ಶಕ್ತಿ ಪಡೆದಿರುವ ಶಕ್ತಿದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನಕ್ಕೆ ಮಧ್ಯಾಹ್ಯ 12 ರವರೆಗೆ ಅವಕಾಶ ನೀಡಲಾಗಿತ್ತು.

ದೇಗುಲಕ್ಕೆ ಬೀಗ:

ಮಧ್ಯಾಹ್ನ 12ರಿಂದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ಎಸ್‌ಕೆಪಿ ರಸ್ತೆಯ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇರಲಿಲ್ಲ. ಕೇತುಗ್ರಸ್ಥ ಗ್ರಹಣ ಪೂರ್ವದಲ್ಲಿಯೇ ಭಕ್ತರು ಅವಸರದಲ್ಲಿ ದೇವಿ ದರ್ಶನ ಪಡೆದರು. ಆದರೆ, ಗ್ರಹಣದ ಹಿನ್ನೆಲೆ ದೇವಸ್ಥಾನದ ಮುಖ್ಯ ಗೇಟ್‌ಗಳನ್ನು ಹಾಗೂ ಗರ್ಭಗುಡಿ ಬಾಗಿಲನ್ನು ಹಾಕಿ, ಬಾಗಿಲಿನ ಸಂದಿಯಲ್ಲಿ ಪರದೆ ಅಡ್ಡ ಬಿಡಲಾಯಿತು. ಅನಂತರ ದೇವಸ್ಥಾನಕ್ಕೆ ಬೀಗ ಹಾಕಲಾಯಿತು.

ಪೂಜೆ- ಮಹಾಮಂಗಳಾರತಿ:

ದುಗ್ಗಮ್ಮನ ದರ್ಶನಕ್ಕೆ ಗ್ರಹಣದ ವಿಚಾರ ತಿಳಿಯದೇ ಬಂದಿದ್ದ ಎಷ್ಟೋ ಮಹಿಳೆಯರು ದೇವಸ್ಥಾನದ ಕಟ್ಟೆಯ ಮೇಲೆಯೇ ಕುಳಿತು, ದುಗ್ಗಮ್ಮನಿಗೆ ಕೈಮುಗಿದು ಹೋದರು. ಉಳಿದಂತೆ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ, ದುಗ್ಗಮ್ಮನ ದೇವಸ್ಥಾನ ಮಧ್ಯಾಹ್ನ 12ರಿಂದ ಸಂಜೆ 7 ಗಂಟೆವರೆಗೆ ಬಾಗಿಲು ಮುಚ್ಚಿದ್ದವು. ಸಂಜೆ ಗ್ರಹಣ ಮುಕ್ತಾಯದ ನಂತರ ದೇವಸ್ಥಾನ ಶುದ್ಧೀಕರಿಸಿ, ದೇವರಿಗೆ ಜಲಾಭಿಷೇಕ, ಹೂವಿನ ಅಲಂಕಾರ, ಪೂಜೆ, ಆರತಿ, ಮಹಾಮಂಗಳಾರತಿ ಮಾಡುವುದರೊಂದಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಹಳೇ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸ್ವಾಗೇರ ಪೇಟೆ ಹಿಂಭಾಗದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನ, ಗೀತಾಂಜಲಿ ಚಿತ್ರ ಮಂದಿರ ಪಕ್ಕದ ಶ್ರೀ ಲಿಂಗೇಶ್ವರ ದೇವಸ್ಥಾನ, ರಾಯರ ಮಠಗಳು, ಸಾಯಿ ಬಾಬಾ ದೇವಸ್ಥಾನ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ, ರಾಯರ ಮಠ, ಹೊನ್ನಾಳಿ ಹಿರೇಕಲ್ಮಠದ ದೇವಸ್ಥಾನ ಸೇರಿದಂತೆ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಗ್ರಹಣದ ಅವದಿಯಲ್ಲಿ ಯಾವುದೇ ಪೂಜೆ ಪುನಸ್ಕಾರ ನಡೆಯಲಿಲ್ಲ. ಕೆಲವು ದೇವಸ್ಥಾನ ಬಾಗಿಲು ಹಾಕಿದ್ದರೆ, ಮತ್ತೆ ಕೆಲವು ದರ್ಶನಕ್ಕಷ್ಟೇ ಅವಕಾಶ ಮಾಡಿಕೊಟ್ಟಿದ್ದವು.

- - -

-3ಕೆಡಿವಿಜಿ5, 6: ಕಳೆದ ವಾರವಷ್ಟೇ ಅದ್ಧೂರಿ ಜಾತ್ರೆ ಮಾಡಿದ ದಾವಣಗೆರೆ ದುಗ್ಗಮ್ಮ ದೇವಿ ದೇವಸ್ಥಾನವನ್ನು ಕೇತುಗ್ರಸ್ಥ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ಬಾಗಿಲು ಹಾಕಲಾಗಿತ್ತು. ದೇವಿ ದರ್ಶನವಾಗದೇ ಮಹಿಳಾ ಭಕ್ತರು ಗುಡಿ ಮೆಟ್ಟಿಲ ಮೇಲೆ ಕುಳಿತರು.