ದೊಡ್ಡಬಳ್ಳಾಪುರ: ವರ್ಷದ ಮೊದಲ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ದೇವಾಲಯಗಳು ಮಂಗಳವಾರ ಮಧ್ಯಾಹ್ನದ ನಂತರ ಬಾಗಿಲು ಮುಚ್ಚಲ್ಪಟ್ಟಿದ್ದವು.
ಬೆಳಗ್ಗೆ ಎಂದಿನಂತೆ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ, ಮಧ್ಯಾಹ್ನದ ಮಹಾಮಂಗಳಾರತಿ ನಡೆಸಿ, ದೇವಾಲಯಗಳನ್ನು ಮುಚ್ಚಲಾಯಿತು. ಮಂಗಳವಾರದ ಹಿನ್ನಲೆ ಘಾಟಿ ಸುಬ್ರಹ್ಮಣ್ಯಕ್ಕೆ ಸಾವಿರಾರು ಜನ ಭಕ್ತಾದಿಗಳು ಆಗಮಿಸಿದ್ದರು. ಆದರೆ ಮಧ್ಯಾಹ್ನ 12 ಗಂಟೆ ವೇಳೆಗೆ ದೇವಾಲಯದ ಗರ್ಭಗುಡಿ, ಪ್ರವೇಶ ದ್ವಾರ, ಮುಖ್ಯದ್ವಾರಗಳನ್ನು ಮುಚ್ಚಲಾಯಿತು.ಗ್ರಹಣ ಮೋಕ್ಷದ ಬಳಿಕ ರಾತ್ರಿ 7.30ಕ್ಕೆ ದೇವಾಲಯ ಶುದ್ದೀಕರಣ ಬಳಿಕ, ಗರ್ಭಗುಡಿಯನ್ನು ತೆರೆಯಲಾಯಿತು. ಬಳಿಕ, ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಲಾಯಿತು. ನೆರೆದಿದ್ದ ಸಹಸ್ರಾರು ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದರು.
ವಿವಿಧ ದೇಗುಲಗಳಲ್ಲಿ ಗ್ರಹಣ ಆಚರಣೆ:ಇತಿಹಾಸಪ್ರಸಿದ್ದ ತೂಬಗೆರೆ ವೆಂಕಟರಮಣಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರದ ಶ್ರೀನರಸಿಂಹಸ್ವಾಮಿ ದೇವಾಲಯಗಳಲ್ಲಿ ಗ್ರಹಣಕಾಲಕ್ಕೂ ಮುನ್ನ ವಾರ್ಷಿಕ ಬ್ರಹ್ಮರಥೋತ್ಸವ ನೆರವೇರಿಸಲಾಯಿತು. ಬಳಿಕ ದೇವಾಲಯವನ್ನು ಮುಚ್ಚಲಾಯಿತು. ಬೆಳಗ್ಗಿನಿಂದ ವಿವಿಧ ಪೂಜಾ ವಿಧಿಗಳು ನಡೆದವು. ಗ್ರಹಣ ಮೋಕ್ಷದ ಬಳಿಕ ರಾತ್ರಿ ವಿಶೇಷ ಪೂಜೆಯೊಂದಿಗೆ ದೇವಾಲಯ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ದಕ್ಷಿಣ ಕಾಶಿ ಎಂದೇ ಖ್ಯಾತವಾದ ಶಿವಗಂಗೆ ಕ್ಷೇತ್ರದಲ್ಲಿ ಗ್ರಹಣ ಆಚರಣೆ ಹಿನ್ನಲೆ ದೇವಾಲಯವನ್ನು ಮಧ್ಯಾಹ್ನ ಬಂದ್ ಮಾಡಿ, ರಾತ್ರಿ ವೇಳೆಗೆ ತೆರೆಯಲಾಯಿತು. ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ, ಹೊಸಕೋಟೆ ಅವಿಮುಕ್ತೇಶ್ವರ ದೇವಾಲಯ, ದೊಡ್ಡಬಳ್ಳಾಪುರದ ಲಕ್ಷ್ಮೀ ವೆಂಕಟರಮಣ ದೇವಾಲಯ, ನೆಲದಾಂಜನೇಯ ದೇವಾಲಯ ಸೇರಿದಂತೆ ಅನೇಕ ಪ್ರಸಿದ್ದ ದೇವಾಲಯಗಳಲ್ಲಿಯೂ ಗ್ರಹಣ ಆಚರಣೆ ನಡೆಯಿತು.
3ಕೆಡಿಬಿಪಿ8-
ಚಂದ್ರಗ್ರಹಣ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯವನ್ನು ಮಂಗಳವಾರ ಮಧ್ಯಾಹ್ನ ಮುಚ್ಚಲಾಗಿತ್ತು.--
3ಕೆಡಿಬಿಪಿ9-ಗ್ರಹಣ ಹಿನ್ನಲೆ ಘಾಟಿ ದೇವಾಲಯ ಮುಖ್ಯದ್ವಾರಕ್ಕೆ ಬೀಗ.