ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಹೋಳಿ ಹುಣ್ಣಿಮೆ ಅಂಗವಾಗಿ ಗಲ್ಲಿ ಗಲ್ಲಿಗಳಲ್ಲೂ ಕಾಮ ದಹನ ಸಡಗರ ಸಂಭ್ರಮದಿಂದ ನಡೆಯಿತು.ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಹಲಗೆ ನಾದದೊಂದಿಗೆ ಅಲ್ಲಲ್ಲಿ ಸುತ್ತಾಡಿ ಕಟ್ಟಿಗೆ ಸಂಗ್ರಹಿಸುತ್ತಿರುವುದು ಕಂಡು ಬಂದಿತು. ಮನೆಗಳಲ್ಲಿ ಮಕ್ಕಳೊಂದಿಗೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಮನೆಯ ಮುಂದೆ ಕಾಮ ದಹನ ಮಾಡಿದರು. ಸಂಜೆ ಪಟ್ಟಣದ ವಿವಿಧ ಬಡಾವಣೆಗಳ ವಿಶಾಲ ಜಾಗೆಯಲ್ಲಿ ಕಟ್ಟಿಗೆ ಜೋಡಿಸಿ ಸುತ್ತಲೂ ರಂಗವಲ್ಲಿ ಚಿತ್ತಾರ ಬಿಡಿಸಿದರು. ಸೂರ್ಯಾಸ್ಥ ಸಮಯವಾಗುತ್ತಿದ್ದಂತೆ ಸಾಮೂಹಿಕ ಪೂಜೆ ಸಲ್ಲಿಸಿದ ನಂತರ ಕಾಮ ದಹನ ಮಾಡಲಾಯಿತು. ಕೆಲವರು ಹೋಳಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಪಟ್ಟಣದ ಸಾರಂಗಭಾವಿ ಹತ್ತಿರ ಹೋಳಿ ಹಬ್ಬದ ಹಾಡುಗಳನ್ನು ಹಾಡಿ ಸಂಭ್ರಮಿಸಲಾಯಿತು. ಹಲಗೆ ನಾದದೊಂದಿಗೆ ಕೆಲವರ ಮನೆಯ ಮುಂದೆಯೂ ಕಾಮದಹನ ಮಾಡುತ್ತಿರುವುದು ವಿವಿಧೆಡೆ ಕಂಡುಬಂದಿತು.
ಪದಕಿ ಪೂಜೆ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹೋಳಿ ಹುಣ್ಣಿಮೆ ದಿನದಂದು ಮಾಡುವ ಪದಕಿ ಪೂಜೆಯನ್ನು ಕುಟುಂಬ ಸದಸ್ಯರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮಾತಂಗಿಯರನ್ನು ಮನೆಗೆ ಆಹ್ವಾನಿಸಿ ಮನೆಯ ಪಡಸಾಲೆಯಲ್ಲಿ ಕಂಬಳಿ ಹಾಕಿ ಗೋದಿ ಸೇರಿದಂತೆ ವಿವಿಧ ಧಾನ್ಯ ಹಾಕಿ ಅದರ ಮೇಲೆ ಮಾತಂಗಿಯರು ತಂದ ಬಿದಿರಿನ ಪುಟ್ಟಿಯಲ್ಲಿ ವಿವಿಧ ತರಕಾರಿ ಇಟ್ಟು ಕಾಯಿ ಕರ್ಪೂರ, ನೈವೇದ್ಯದೊಂದಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದ ನಂತರ ಕುಟುಂಬ ಸದಸ್ಯರಿಗೆ ಮಾತಂಗಿಯು ಬೇವಿನ ತಪ್ಪಲಿನಿಂದ ನಿವಾಳಿಸಿ ಬೇವು ಇಳಿಸುವ ಸಂಪ್ರದಾಯ ಹೋಳಿ ಹುಣ್ಣಿಮೆ ದಿನದಂದು ನಡೆದುಕೊಂಡು ಬಂದಿದೆ. ಈ ಸಂಪ್ರದಾಯ ಪೂಜೆ ಅನುಸರಿಕೊಂಡು ಬಂದ ಕುಟುಂಬಗಳಲ್ಲಿ ಪದಕಿ ಪೂಜೆ ಮಾಡುವುದು ಕಂಡುಬಂದಿತ್ತು.ಸಂಪ್ರದಾಯದಂತೆ ಹೋಳಿ ಹುಣ್ಣಿಮೆ ದಿನ ನೂರಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಹಲವು ವರ್ಷಗಳಿಂದ ಪದಕಿ ಪೂಜೆ ಮಾಡುತ್ತಿದ್ದೇವೆ. ಕಷ್ಟಗಳು ದೂರವಾಗಿ ಸುಖ-ಸಮೃದ್ಧಿ ವೃದ್ಧಿಯಾಗಲಿ ಎಂದು ಕುಟುಂಬ ಸದಸ್ಯರು ಪ್ರಾರ್ಥಿಸಿಕೊಳ್ಳುತ್ತಾರೆ ಎಂದು ಮಾತಂಗಿ ಭೀಮವ್ಬ ಮ್ಯಾಗೇರಿ ಈ ಪದಕಿ ಪೂಜೆ ಕುರಿತು ಹೇಳಿದರು.