ಸಾರಾಂಶ
ಉತ್ತರ ಕರ್ನಾಟಕದಿಂದ ಎಂ.ಬಿ.ಪಾಟೀಲ ಅವರನ್ನು ಮುಖ್ಯಮಂತ್ರಿಗಳನ್ನಾಗಿ ನೋಡುವ ಆಸೆ ನಮಗೆ. ಉತ್ತರ ಕರ್ನಾಟಕದಿಂದ ಎಂ.ಬಿ.ಪಾಟೀಲ ಮುಖ್ಯಮಂತ್ರಿ ಆಗಬೇಕು ಎಂದು ನಾವು ಪ್ರಯತ್ನ ಪಟ್ಟೆವು ಎಂದು ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಆಲಮೇಲ : ಉತ್ತರ ಕರ್ನಾಟಕದಿಂದ ಎಂ.ಬಿ.ಪಾಟೀಲ ಅವರನ್ನು ಮುಖ್ಯಮಂತ್ರಿಗಳನ್ನಾಗಿ ನೋಡುವ ಆಸೆ ನಮಗೆ. ಉತ್ತರ ಕರ್ನಾಟಕದಿಂದ ಎಂ.ಬಿ.ಪಾಟೀಲ ಮುಖ್ಯಮಂತ್ರಿ ಆಗಬೇಕು ಎಂದು ನಾವು ಪ್ರಯತ್ನ ಪಟ್ಟೆವು ಎಂದು ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಕಡಣಿ ಗ್ರಾಮದ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆ ಮತ್ತು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಮೊನ್ನೆ ಸಿದ್ದರಾಮಯ್ಯ ಜೊತೆ ಮಾತನಾಡುವಾಗ ಒಂದು ಪ್ರಶ್ನೆ ಬಂತು ಉತ್ತರ ಕರ್ನಾಟಕದವರನ್ನು ಸಿಎಂ ಮಾಡಬೇಕು ಎಂದಾಗ ಎಂ.ಬಿ.ಪಾಟೀಲ ಹೆಸರು ಪ್ರಸ್ತಾಪವಾಯಿತು.ಅವರಿಗೆ ಭವಿಷ್ಯದಲ್ಲಿ ಯೋಗ ಇರಬಹುದು ಹೈಕಮಾಂಡ್ ಇದರ ಬಗ್ಗೆ ಮಾತನಾಡುತ್ತಿದೆ. ಜಗತ್ತಿನಲ್ಲಿ ನಾನು ನನ್ನದು ಎಂಬ ಸ್ವಾರ್ಥ ಹೆಚ್ಚಾಗಿದೆ.
ಪ್ರಸ್ತುತ ರಾಜಕೀಯ ವಾತಾವರಣ ಕಲುಷಿತವಾಗಿದ್ದು, ಸಕಲ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಜನ್ಮವಾಗಿದೆ ಎಂದರು.ಕಾಲಜ್ಞಾನ ಹೇಳಿದ್ದು ಅಂದದ ಪಟ್ಟಣ ಚಂದ ಎನ್ನಬೇಡ ಲೋಹದ ಗಿಳಿಗಳೆರಡು ಬಂದಾವ ಎಂದು ಕಾಲಜ್ಞಾನಿಗಳು ಹೇಳಿದರು. ಪ್ರಕೃತಿಯಿಂದ ಯಾವುದೇ ವಿನಾಶವಾಗಬಾರದು ಎಂದು ಅಮೆರಿಕಾದವರು ಪೆಂಟಗಾನ್ ನಗರವನ್ನು ಕಟ್ಟಿದರು. ವಿಜ್ಞಾನಕ್ಕೆ ಸವಾಲಾಗಿ ಪಟ್ಟಣವನ್ನು ಕಟ್ಟಿದರು. ಆದರೆ ಲಾಡೆನ್ ಎರಡು ಲೋಹದ ಹಕ್ಕಿಗಳಿಂದ ಪಟ್ಟಣವನ್ನು ನಾಶ ಮಾಡಿದ.
ಇದನ್ನು ನಮ್ಮ ಕಾಲಜ್ಞಾನಿಗಳು ನೂರಾರು ವರ್ಷಗಳ ಹಿಂದೆಯೇ ಹೇಳಿದರು. ಈ ಮಾತು ಈಗ ನಿಜವಾಯಿತು. ವಿಪರೀತ ಮಳೆ ಮತ್ತು ಭೂಕಂಪವಾಗುತ್ತದೆ ಎಂದು ನಾನು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಕಾಲಜ್ಞಾನಿಗಳು ವೈಜ್ಞಾನಿಕ ಹಿನ್ನೆಲೆಯಿಂದ ಕಾಲಜ್ಞಾನ ನುಡಿಯಬೇಕು ಎಂದು ಹೇಳಿದರು. ಅಲ್ಲದೇ, ಈ ವರ್ಷ ಮಳೆ ಬೆಳೆ ಚನ್ನಾಗಿದೆ. ಕರ್ನಾಟಕ ಸಮೃದ್ಧ ನಾಡಾಗುತ್ತದೆ. ಈ ಬಗ್ಗೆ ಸವಿಸ್ತಾರವಾಗಿ ಮುಂದೆ ಹೇಳುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹದಿಂದ ರೈತರಿಗೆ ಬಡವರಿಗೆ ತುಂಬಾ ಅನುಕೂಲವಾಗುತ್ತದೆ. ಮೊದಲು ಬಹಳಷ್ಟು ಸಾಮೂಹಿಕ ವಿವಾಹವಾಗುತ್ತಿದ್ದವು ಇತ್ತೀಚೆಗೆ ಸಾಮೂಹಿಕ ವಿವಾಹಗಳ ಸಂಖ್ಯೆ ಕಡಿಮೆಯಾಗಿರುವುದು ವಿಷಾದನೀಯ. ಮುಂಬರುವ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮನುಷ್ಯರು ಜಾಗದಲ್ಲಿ ರೋಬೋಟ್‌ಗಳು ಕೆಲಸ ಮಾಡಲಿವೆ, ಇಡೀ ವಿಶ್ವಕ್ಕೆ ನಾವು ಆಧ್ಯಾತ್ಮ, ಯೋಗ, ಆಯುರ್ವೇದ ಇವೆಲ್ಲವನ್ನು ನೀಡಿದ್ದೇವೆ. ಇದು ನಮ್ಮ ಹೆಮ್ಮೆ ವಿಷಯವಾಗಿದೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ಸರ್ಕಾರ ರಾಜ್ಯಕ್ಕೆ ಐದು ಗ್ಯಾರಂಟಿ ನೀಡಿದ್ದು, ಕ್ಷೇತ್ರದ ಜನರಿಗೆ ನಾನು ಏಳು ಗ್ಯಾರಂಟಿಗಳ ಭರವಸೆ ನೀಡಿದ್ದೆ. ಜೊತೆಗೆ ಆಲಮೇಲ ತೋಟಗಾರಿಕೆ ಕಾಲೇಜು ಮತ್ತು ಕಡಣಿ ಬ್ಯಾರೇಜ್ ಇವುಗಳನ್ನು ಸಹ ನಮ್ಮ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದೆ ಎಂದರು.
ಆಳಂದ ಶಾಸಕ ಬಿ.ಆರ್ ಪಾಟೀಲ ಮತ್ತು ಸೋನ್ನ ದಾಸೋಹಮಠದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರಗುಂಡ ಶಿವಾಚಾರ್ಯ, ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಮುರುಗೇಂದ್ರ ಶಿವಾಚಾರ್ಯರು, ಶ್ರೀಶೈಲ ಮಹಾಸ್ವಾಮಿಗಳು, ಸಂದೀಪ ಪಾಟೀಲ, ಗುತ್ತಿಗೆದಾರ ವೀರಭದ್ರ ಕತ್ತಿ, ಭೋಗಪ್ಪ ಲಾಳಸಂಗಿ, ಪಪಂ ಅಧ್ಯಕ್ಷ ಸಾಧಿಕ ಸುಂಬಡ, ಪಪಂ ಸದಸ್ಯ ಅಶೋಕ ಕೊಳಾರಿ, ಬಸವರಾಜ್ ಕುಮಸಗಿ, ಬಸಲಿಂಗಪ್ಪ ಕತ್ತಿ, ಕೇದಾರನಾಥ್ ಕತ್ತಿ, ಶಿವುಕುಮಾರ ಗುಂದಗಿ, ಬಸವರಾಜ್ ಬಾಗೇವಾಡಿ, ದೌಲಪ್ಪ ಸೊನ್ನ, ಸಿಪಿಐ ನಾನಾಗೌಡ ಪಾಟೀಲ, ಪಿಎಸ್ಐ ಅರವಿಂದ ಅಂಗಡಿ, ರಮೇಶ ಭಂಟನೂರ, ಶ್ರೀಶೈಲ ಮಠಪತಿ, ಪ್ರಭು ವಾಲೀಕಾರ, ಬಸವರಾಜ ತಾವಗೇರಿ, ಸಂತೋಷ ಕಟಬರ, ಶಿವಶರಣ ಗುಂದಗಿ ಸೇರಿದಂತೆ ಅನೇಕರಿದ್ದರು.
ಕೋಡಿಹಳ್ಳಿ ಮಠದ ಸ್ವಾಮಿಗಳು ಏನಾದರೂ ಹೇಳಿದ್ದಾರೆಂದರೆ ಜನರಿಗೆ ಮತ್ತು ನಮ್ಮ ರಾಜಕಾರಣಿಗಳಿಗೆ ತುಂಬಾ ಕುತೂಹಲ. ಯಾವ ಕಾಲಜ್ಞಾನದ ಬಗ್ಗೆ ಹೇಳುತ್ತಾರೆ ಎಂಬುದು ಒಂದು ಕುತೂಹಲ. ಆ ಮಠದ ಒಂದು ಮಹಿಮೆಯೇ ಹಾಗಿದೆ. ಅವರಿಂದ ಬಂದಂತಹ ಹೇಳಿಕೆಗಳು ದೈವಶಕ್ತಿ ಹೇಳಿಕೆ ಆಗಿರುತ್ತವೆ.
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ