ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಕ್ಕೆ ರಾಜರ ಕಾಲದಂತೆ ಈಗಲೂ ಪ್ರೋತ್ಸಾಹ ಸಿಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹೇಳಿದರು.ನಗರದ ಪುರಭವನದಲ್ಲಿ ಬುಧವಾರ ಎಂ.ಬಿ. ಅನಂತಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಟ್ರಸ್ಟ್ ನ ತೃತೀಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹೀಗಾಗಿಯೇ ಮೈಸೂರು ರಾಜರ ಕಾಲದಿಂದಲೂ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರಾಗಿದೆ ಎಂದರು.ಈ ಹಿಂದೆ ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಕಂಪನಿಗಳು ಪುರಭವನದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಈಗಲೂ ಆ ಪರಂಪರೆ ಮುಂದುವರಿದಿದೆ ಎಂದು ಅವರು ಹೇಳಿದರು.ಎಂ.ಬಿ.ಅನಂತಸ್ವಾಮಿ ಅವರು ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಡಿ. ರಾಮು ಅವರೊಂದಿಗೆ ಸೇರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದವರು. ಅಂಥವರ ಹೆಸರನ್ನು ಅವರ ಪುತ್ರ ಕಾಂತರಾಜು ಉಳಿಸಲು ಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಗರಪಾಲಿಕೆ ಮಾಜಿ ಸದಸ್ಯೆ ರಮೇಶ್ ರಮಣಿ, ಜಯದೇವ ಆಸ್ಪತ್ರೆ ಅರವಳಿಕೆ ತಜ್ಞ ಡಾ.ಕೆ.ಆರ್. ಮಂಜುನಾಥ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್, ಎಚ್.ಡಿ. ಕೋಟೆಯ ಡಾ. ಗಣೇಶ್ ಮುಖ್ಯ ಅತಿಥಿಗಳಾಗಿದ್ದರು.ಟ್ರಸ್ಚಿನ ಅಧ್ಯಕ್ಷ ಎ. ಕಾಂತರಾಜು, ಕಾರ್ಯದರ್ಶಿ ಚಂದ್ರು, ಖಜಾಂಚಿ ಬಿ.ಆರ್. ಜ್ಯೋತಿ, ನಿರ್ದೇಶಕರಾದ ಬಿ. ನಾಗೇಶ್, ಕೆ. ಮಂಜುನಾಥ್, ಸಿ. ಮಹದೇವ, ಸುಗುಣ ಕಾಂತರಾಜು, ಜ್ಯೋತಿ, ಎಂ.ಎಸ್. ಲಕ್ಷ್ಮಿಕಾಂತ್, ಸಲಹೆಗಾರ ಎಚ್.ಎಸ್. ಚಂದ್ರಶೇಖರ್ ಇದ್ದರು. ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ
ಜಿ. ಗುರುರಾಜ್ ಮತ್ತು ವೃಂದದವರು ಮಂಗಳವಾದ್ಯ ನುಡಿಸಿದರು. ಡಾ.ರೇಖಾ ಅರುಣ್ ನೇತೃತ್ವದ ಅರುಣರಾಗ ಕ್ರಿಯೇಷನ್ಸ್ ನವರು ರಸಸಂಜೆ, ಕಿರಗಸೂರು ರಾಜಪ್ಪ ಮತ್ತು ತಂಡದವರು ರಂಗಗೀತೆಗಳು, ಎಂ.ಆರ್. ಮಂಜುನಾಥ್ ಮತ್ತು ವೃಂದದಿಂದ ತಾಳವಾದ್ಯ ವಾದನ, ಎಚ್.ಎಸ್. ತಾಂಡವಮೂರ್ತಿ ನಿರ್ದೇಶನದಲ್ಲಿ ಪದ್ಮಶ್ರೀ ಧನುರ್ ವೀಣಾ ಪೀಠ ತಂಡದಿಂದ ಪಿಟೀಲು ವಾದನ ನಡೆದು, ಸಭಿಕರನ್ನು ರಂಜಿಸಿದವು.---ಬಾಕ್ಸ್...--ಸನ್ಮಾನಿತರುಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಡಿ. ರಾಮು, ಶ್ರೀರಂಗಪಟ್ಟಣದ ಪಿ. ರಾಜಗೋಪಾಲ್, ಅಂತಾರಾಷ್ಟ್ರೀಯ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಕಲಾರತ್ನ ಪ್ರಶಸ್ತಿ ಪುರಸ್ಕೃತ ಮಂಡ್ಯದ ಗಣೇಶ್, ಮೈಸೂರಿನ ಕಲಾವಿದರಾದ ಮೋಹನ್ ದೇವಯ್ಯ, ಹರಿಕಥಾ ವಿದುಷಿ ಜಯಲಕ್ಷ್ಮೀ ನಾಯ್ಡು, ಹಿರಿಯ ಕಲಾವಿದ ಕಿರಗಸೂರು ರಾಜಪ್ಪ, ಆಕಾಶವಾಣಿ ಕಲಾವಿದೆ ಡಾ.ಶ್ರುತಿ ರಂಜನಿ ಅವರನ್ನು ಸನ್ಮಾನಿಸಲಾಯಿತು.ಅಂದಾವರೆ ಕೆಂದಾವರೆ...ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ ಮಾತನಾಡಿ, ಜನಪದವೇ ಶಕ್ತಿ, ಜನಪದವೇ ಎಲ್ಲಕ್ಕೂ ಬೇರು ಎಂದರು. ಅಂದಾವರೆ ಕೆಂದಾವರೆ ಚೆಂದಕ್ಕೆ ಮಾಲೆ ಬಿಲ್ಪತ್ರೆ...ಹಾಡಿದರು. ಈಗಿನ ಹಾಡುಗಾರರು ಕೆಂದಾವರೆ ಬದಲು ಮಂದಾವರೆ ಎಂದು ಚೆಂದಕ್ಕೆ ಬದಲು ಚೆಂದಕ್ಕಿ ಎಂದು ಹಾಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.ನಮ್ಮ ಕಾಲದಲ್ಲಿ ಹೊಟ್ಟೆಗೆ ಹಿಟ್ಟಿರಲಿಲ್ಲ. ಅದಕ್ಕೋಸ್ಕರ ಹಾಡು ಕಲಿತೆವು. ಅನ್ನವನ್ನು ಹಬ್ಬಗಳಲ್ಲಿ ಮಾತ್ರ ನೋಡುತ್ತಿದ್ದೋ. ಈಗ ಎಲ್ಲೆಡೆ ಅನ್ನ ಚೆಲ್ಲುವ ಪ್ರವೃತ್ತಿ. ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಅನ್ನಕ್ಕೆ ಗೌರವ ನೀಡಿ ಎಂದು ಅವರು ಮನವಿ ಮಾಡಿದರು.