ಎಂ.ಕಾಂ. ಪರೀಕ್ಷೆಯಲ್ಲೂ ಅಪೂರ್ಣ ಪ್ರಶ್ನೆಗಳ ಬರೆದ ದಾವಿವಿ!

| Published : Sep 12 2024, 01:57 AM IST

ಎಂ.ಕಾಂ. ಪರೀಕ್ಷೆಯಲ್ಲೂ ಅಪೂರ್ಣ ಪ್ರಶ್ನೆಗಳ ಬರೆದ ದಾವಿವಿ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಚೆಲ್ಲಾಟವಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

- 4ನೇ ಸಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿಗಳು ಕಕ್ಕಾಬಿಕ್ಕಿ

- - - - ಎಂ.ಕಾಂ.ನ ಬಿಸಿನೆಸ್ ಅಪ್ಲಿಕೇಷನ್‌ ಅಂಡ್ ಆಪರೇಷನ್ ರೀಸರ್ಚ್‌ ಪರೀಕ್ಷೆಯಲ್ಲಿ ಪ್ರಮಾದ

- ಇತ್ತೀಚೆಗಷ್ಟೇ ಬಿ.ಕಾಂ. ಪರೀಕ್ಷೆಯಲ್ಲೂ ಉತ್ತರ ಸಮೇತ ಪ್ರಶ್ನೆಪತ್ರಿಕೆ ನೀಡಿದ್ದ ವಿವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಚೆಲ್ಲಾಟವಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಎಂ.ಕಾಂ. 4ನೇ ಸೆಮಿಸ್ಟರ್‌ನ ಬಿಸಿನೆಸ್ ಅಪ್ಲಿಕೇಷನ್‌ ಅಂಡ್ ಆಪರೇಷನ್ ರೀಸರ್ಚ್‌ ವಿಷಯದ ಪರೀಕ್ಷೆ ಮಂಗಳವಾರ ನಡೆದಿದ್ದು, ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡುವ ಮೂಲಕ ವಿವಿ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿದೆ.

ಎಂ.ಕಾಂ. 4ನೇ ಸಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಶ್ನೆಪತ್ರಿಕೆ ಕೈ ಸೇರುತ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡಿದ್ದರಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಏನು ಬರೆಯಬೇಕೆಂಬುದು ತೋಚದೇ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತಂದಿದ್ದರು.

ಒಟ್ಟು 70 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿತ್ತು. ಬಹುತೇಕ ಪ್ರಶ್ನೆಗಳು ಅಪೂರ್ಣವಾಗಿದ್ದರಿಂದ ವಿದ್ಯಾರ್ಥಿಗಳು ಉತ್ತರ ಬರೆಯಲಾಗದೇ ಗೊಂದಲಕ್ಕೀಡಾಗಿದ್ದಾರೆ. ಇತ್ತೀಚೆಗಷ್ಟೇ ಬಿ.ಕಾಂ. 6ನೇ ಸೆಮಿಸ್ಟರ್‌ನ ಇ-ಕಾಮರ್ಸ್‌ ಪ್ರಶ್ನೆಪತ್ರಿಕೆಯಲ್ಲಿ ಉತ್ತರಗಳನ್ನೂ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದ ದಾವಣಗೆರೆ ವಿವಿ ಪರೀಕ್ಷಾಂಗ ವಿಭಾಗ, ಇದೀಗ ಮತ್ತೊಂದು ಸಮಸ್ಯೆ ಮೈಮೇಲೆಳೆದುಕೊಂಡಿದೆ.

ಆಗಿರುವ ಎಡವಟ್ಟನ್ನು ಸರಿಪಡಿಸಿ, ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು, ಪಾಲಕರು ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಒತ್ತಾಯಿಸಿದ್ದಾರೆ.

- - -

ಬಾಕ್ಸ್‌ * ಪರೀಕ್ಷೆಯಲ್ಲೇ ಯಾಕೆ ಎಡವಟ್ಟು? ಏನು ಸಮಸ್ಯೆ?

ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದಲ್ಲಿ ಏನೋ ಸಮಸ್ಯೆ ಇದ್ದಂತಿದೆ. ಕೆಲವೇ ವಾರಗಳ ಹಿಂದಷ್ಟೇ ಬಿ.ಕಾಂ. 6ನೇ ಸೆಮಿಸ್ಟರ್‌ನ ಇ-ಕಾಮರ್ಸ್‌ ಪ್ರಶ್ನೆಪತ್ರಿಕೆಯಲ್ಲಿ ಉತ್ತರಗಳನ್ನೂ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದರು. ಈ ಘೋರ ಲೋಪದಿಂದ ಎಚ್ಚೆತ್ತುಕೊಳ್ಳದ ದಾವಿವಿ, ಇದೀಗ ಎಂ.ಕಾಂ. 4ನೇ ಸೆಮಿಸ್ಟರ್ ಪರೀಕ್ಷೆಗೆ ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆ ನೀಡಿ, ಮತ್ತೆ ಪ್ರಮಾದವೆಸಗಿದೆ. ಇದರಿಂದ ದಾವಿವಿ ಏನು ಸಾಧಿಸಲು ಹೊರಟಿದೆ ಎಂಬ ಸಹಜ ಪ್ರಶ್ನೆ ಎಲ್ಲರನ್ನೂ ಮೂಡುವಂತಾಗಿದೆ.

ಯಾರದ್ದೋ ಮೇಲಿನ ಸಿಟ್ಟು, ದ್ವೇಷಕ್ಕೆ, ಯಾರನ್ನೋ ಗುರಿಯಾಗಿಸಿಕೊಂಡು ಪದೇಪದೇ ದಾವಣಗೆರೆ ವಿಶ್ವ ವಿದ್ಯಾನಿಲಯದ ವಿವಿಧ ಪರೀಕ್ಷೆಗಳಲ್ಲಿಯೇ ಸಮಸ್ಯೆ ಮಾಡಲಾಗುತ್ತಿದೆ. ಸರ್ಕಾರ, ದಾವಿವಿ ಕುಲಪತಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಪ್ರಶ್ನೆಪತ್ರಿಕೆ ಬದಲಿಗೆ ಉತ್ತರ ಸಮೇತ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದು ಆಕಸ್ಮಿಕ ಆದ ಲೋಪ ಎನ್ನಬಹುದು. ಆದರೆ, ಮಂಗಳವಾರ ಆದ ಎಂಕಾಂ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಅಪೂರ್ಣ ಪ್ರಶ್ನೆಗಳನ್ನು ನೀಡಿರುವುದನ್ನು ನೋಡಿದರೆ ದಾವಣಗೆರೆ ವಿವಿಯ ಪರೀಕ್ಷಾ ವಿಭಾಗದಲ್ಲೇ ಏನೋ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಮೊದಲೇ ದಾವಣಗೆರೆ ವಿವಿ ವಿವಿಧ ಹುದ್ದೆಗಳ ನೇಮಕಾತಿಯ ವೇಳೆ ಆಗಿರುವ ಗೊಂದಲ, ಸಮಸ್ಯೆಗಳು, ಅಕ್ರಮಗಳ ಆರೋಪಗಳು ಇನ್ನೂ ಜನರ ಮನದಲ್ಲಿ ಹಸಿರಾಗಿಯೇ ಇದೆ. ಅಂಥದ್ದರಲ್ಲಿ ಪದೇಪದೇ ಪರೀಕ್ಷೆಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಇಂತಹ ಎಡವಟ್ಟುಗಳು ಆಗುತ್ತಿರುವುದು ಸಾಕಷ್ಟು ಅನುಮಾನಗಳನ್ನೂ ಹುಟ್ಟು ಹಾಕುತ್ತಿದೆ. ಸಂಬಂಧಿಸಿದವರು ಎರಡೂ ಎಡವಟ್ಟು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೂಲಂಕಶವಾಗಿ ಪರಿಶೀಲಿಸಿದರೆ ಎಲ್ಲಿ, ಯಾರಿಂದ, ಹೇಗೆ ಲೋಪ ಆಗುತ್ತಿದೆ ಎಂಬುದರ ಸುಳಿವಾದರೂ ಸಿಕ್ಕೀತು. ಈ ಬಗ್ಗೆ ದಾವಿವಿ ಗಮನ ಹರಿಸಲಿ ಎಂದು ವಿದ್ಯಾರ್ಥಿ ಮುಖಂಡರು ಒತ್ತಾಯಿಸಿದ್ದಾರೆ.

- - - -11ಕೆಡಿವಿಜಿ6, 7, 8:

ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಮಂಗಳವಾರ ಎಂ.ಕಾಂ. 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆಪತ್ರಿಕೆಯಲ್ಲಿ ಅಪೂರ್ಣ ಪ್ರಶ್ನೆಗಳಿರುವುದು. -11ಕೆಡಿವಿಜಿ9, 10:

ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯ ಕಟ್ಟಡ.