ಸಾರಾಂಶ
- ಉಮಾ ಮಹೇಶ್ವರ ಸಮುದಾಯ ಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 138 ನೇ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಹೊರತಂದು ಪ್ರೋತ್ಸಾಹಿಸ ಬೇಕು ಎಂದು ರಾಜ್ಯ ಪ್ರವಾಸೋದ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಡಾ.ಸರ್ವಪಲ್ಲಿ ರಾಧಕೃಷ್ಣನ್ 138ನೇ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಸರ್ವಪಲ್ಲಿ ರಾಧಕೃಷ್ಣನ್ ಮಹಾನ್ ತತ್ವಜ್ಞಾನಿ ಹಾಗೂ ದಾರ್ಶನಿಕರಾಗಿದ್ದರು. ಮಗುವಿಗೆ ತಂದೆ ತಾಯಿ ನಡೆಯುವುದನ್ನು ಕಲಿಸಿದರೆ ಮಗುವಿಗೆ ತಿದ್ದಿ ತೀಡಿ ಅಕ್ಷರಾಭ್ಯಾಸ ಕಲಿಸಿ ಉತ್ತಮ ಪ್ರಜೆಯಾಗಿ ರೂಪಿಸುವ ಕೆಲಸ ಶಿಕ್ಷಕರು ಮಾಡುತ್ತಾರೆ. ಮಕ್ಕಳಲ್ಲಿ ಕನಸಿನ ರೆಕ್ಕೆಕಟ್ಟಿ ಹಾರಿಸುವವರು ಗುರುಗಳು. ಪ್ರಸ್ತುತ ಹಿಂದೆ ಶಿಕ್ಷಕರ ಬಗ್ಗೆ ಇದ್ದಂತೆ ಶ್ರದ್ಧೆ, ಭಕ್ತಿ ಹೊರಟು ಹೋಗಿದೆ. ಮಕ್ಕಳು ಮೊಬೈಲ್ ಗೆ ದಾಸರಾಗಿ ದಾರಿ ತಪ್ಪುತ್ತಿದ್ದು ಅದರಿಂದ ಮಕ್ಕಳನ್ನು ಪಾರು ಮಾಡುವ ಜವಾಬ್ಧಾರಿ ಶಿಕ್ಷಕರ ಮೇಲಿದೆ. ಮೊಬೈಲ್ ನಿಂದ ಪೋಷಕರೊಂದಿಗೆ ಮಕ್ಕಳ ಮಾತುಕತೆಯಿಲ್ಲವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಬೇಕು. ಅವರಲ್ಲಿರುವ ಪ್ರತಿಭೆ ಪ್ರೋತ್ಸಾಹಿಸಬೇಕು ಎಂದರು.
ಲೇಖಕಿ ಕೊಪ್ಪದ ದೀಪ ಹೀರೆಗುತ್ತಿ ಉಪನ್ಯಾಸ ನೀಡಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿರಬೇಕು. ಶಿಕ್ಷಕರಲ್ಲಿ ಸರಳತೆ ಇರಬೇಕು. ನಮ್ಮನ್ನು ನಾವು ಬದುಕಿನಲ್ಲಿ ಏನನ್ನೊ ಎಂದು ತಿಳಿದುಕೊಂಡಿರುತ್ತೇವೆ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಹಗುರವಾಗಿ ತೆಗೆದುಕೊಳ್ಳಬೇಕು. ಶಿಕ್ಷಕರಾದವರು ತಮ್ಮ ಕಿರೀಟ ಕಳಚಿಟ್ಟು ಸಾಮಾನ್ಯ ವ್ಯಕ್ತಿಗಳಾಗ ಬೇಕು. ಮಕ್ಕಳಿಂದಲೂ ಕಲಿಯುವ ಸಂಗತಿಗಳು ಇದೆ ಎಂದರು.ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ದೇಶ ಕಟ್ಟುವ, ಪ್ರಗತಿಯತ್ತ ಕೊಂಡ್ಯೂಯುವ ಭವಿಷ್ಯದ ಜನಾಂಗವನ್ನು ತಿದ್ದಿ ಮನುಷ್ಯರನ್ನಾಗಿ ಮಾಡುವ ಪವಿತ್ರ ವೃತ್ತಿ ಶಿಕ್ಷಕರದ್ದಾಗಿದೆ. ಪೋಷಕರು ಮಗುವಿಗೆ ಜನ್ಮ ನೀಡಿದರೆ ಜೀವನದ ದಾರಿ ತೋರಿಸುವವರು ಶಿಕ್ಷಕರು. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅದನ್ನು ಹೊರ ಹೊಮ್ಮಿಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಬಿಇಒ ಕೆ.ಆರ್. ಪುಷ್ಪಾ, ತಾಲೂಕಿನ ಉತ್ತಮ ಶಿಕ್ಷಕರಾದ ಅಂಜನಪ್ಪ, ಗಂಗಾಧರಪ್ಪ,ಸಮಿತ್ರಾ, ತಾರಾ, ಲಲಿತಾ , ನಯನಾ ಮತ್ತು ಮೆಸ್ಕಾಂ ನ ಪವರ್ ಮ್ಯಾನ್ ಶಿವರಾಜ್ ಅವರನ್ನು ಸನ್ಮಾನಿಸಲಾಯಿತು.ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಿ.ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಪಪಂ ಅಧ್ಯಕ್ಷೆ ಜುಬೇದಾ, ಉಪಾಧ್ಯಕ್ಷೆ ಉಮಾಕೇಶವ್. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ,ಸದಸ್ಯೆ ಸುರಯ್ಯಬಾನು, ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಕೆಪಿಎಸ್ ಸಿ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸದಸ್ಯ ಅಬೂಬಕರ್, ಪ್ರಭಾರಿ ಬಿಇಒ ಸೇವ್ಯಾ ನಾಯಕ್, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಟ್ಟೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಶೋಕ್, ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತಾ, ಶಿಲ್ಪಕಲಾ,ನಾಗರಾಜ್ ಅಪ್ಪಾಜಿ, ಬಿ.ಟಿ.ಕುಮಾರ್ ಇದ್ದರು.