ಸಾರಾಂಶ
ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗಂಗಾಮತಸ್ಥ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ. ಈ ವರ್ಗದ ಜನ ತಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯ ಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಕರೆ ನೀಡಿದರು.
ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಎಂಬಿಬಿಎಸ್ ಪದವಿ ಪಡೆದ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಗಂಗಾಮತಸ್ಥ ಸಮುದಾಯ ಸಮಾಜದ ಅತ್ಯಂತ ಕೆಳಸ್ತರದಲ್ಲಿದೆ. ಆ ಸಮಾಜದ ಜನ ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಈ ವರ್ಗ ಎಷ್ಟೇ ಪ್ರಯತ್ನ ಪಟ್ಟರೂ ಅಭಿವೃದ್ಧಿಯಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ, ಈ ಸಮುದಾಯದ ಪಂಗಡಗಳಲ್ಲಿರುವ ಭಿನ್ನಾಭಿಪ್ರಾಯ ಮತ್ತು ಆಂತರಿಕ ವೈರುಧ್ಯಗಳು ಎಂದು ವಿಷಾಧಿಸಿದರು.ಯಾವುದೇ ಕೆಳ ವರ್ಗಗಳು ಅಭಿವೃದ್ಧಿ ಹೊಂದಬೇಕಾದರೆ ಆ ಸಮಾಜದ ಜನ ಸಂಘಟಿತರಾಗಬೇಕು. ಎಷ್ಟೇ ಕಷ್ಟವಾದರೂ ಬಿಡದೆ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಹಾಗಾದಾಗ ಮಾತ್ರ ಆ ಸಮುದಾಯಗಳು ಪ್ರಗತಿ ಹೊಂದುತ್ತವೆ ಎಂದರು.ನಾವು ನಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಸಂಘಟಿತರಾಗದಿದ್ದರೆ, ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡ ದಿದ್ದರೆ, ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.ಸಮಾಜದ ಮುಖಂಡ ಎಸ್. ಚಂದ್ರಶೇಖರ್ ಮಾತನಾಡಿ, ನಾವು ನಾವೇ ಕಚ್ಚಾಡಿಕೊಂಡು ಹೋದರೆ ಇನ್ನೂ ನೂರು ವರ್ಷವಾದರೂ ನಮ್ಮ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಆದ್ದರಿಂದ ಕಚ್ಚಾಟ ಬಿಟ್ಟು ಎಲ್ಲರೂ ಒಂದಾಗಿ ಸಮಾಜದ ಗುರುಪೀಠದಡಿ ಸಾಗಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಕೆ.ಎಂ. ಧನಂಜಯ ಮಾತನಾಡಿ, ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಗಂಗಾ ವಿದ್ಯಾಸಿರಿ ಯೋಜನೆ ಪ್ರಾರಂಭಿಸಿದ್ದು ಅದಕ್ಕೆತಾವು ₹25 ಸಾವಿರ ದೇಣಿಗೆ ನೀಡಿದ್ದು. ಸಮಾಜದ ಎಲ್ಲರೂ ಯೋಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸಿ.ಆರ್.ಲೋಕೇಶಪ್ಪ ಮಾತನಾಡಿ, ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಪ್ರತಿ ವರ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಟಿ. ಅಶೋಕ್, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಗಂಗಾ ವಿದ್ಯಾ ಸಿರಿ ಯೋಜನೆಗೆ ಸಮಾರಂಭದಲ್ಲಿ ಚಾಲನೆ ನೀಡಲಾಯಿತು. ಅಂಬಿಗರ ಶರಣ ಸಂಸ್ಕೃತಿ ಉತ್ಸವದ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಎಂಬಿಬಿಎಸ್ ಪದವಿ ಪಡೆದವರನ್ನು ಮತ್ತು ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್, ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿ ವೃದ್ಧಿ ಸಂಘದ ಗೌರವಾಧ್ಯಕ್ಷ ಡಾ. ಟಿ. ಕೃಷ್ಣಯ್ಯ, ಉಪಾಧ್ಯಕ್ಷ ಪ್ರೊ. ಎಚ್.ಡಿ. ಕಟ್ಟಿಮನಿ, ತಾಲೂಕು ಅಧ್ಯಕ್ಷ ಎಂ.ಪಿ. ಗೋಪಾಲ್, ಕಡೂರು ತಾಲೂಕು ಅಧ್ಯಕ್ಷ ಎಂ.ಎಸ್. ವಸಂತಕುಮಾರ್, ತರೀಕೆರೆ ತಾಲೂಕು ಅಧ್ಯಕ್ಷ ಎನ್. ಪರಮೇಶ್, ಜಿಲ್ಲಾ ಖಜಾಂಚಿ ಎಸ್.ಎಚ್. ವೆಂಕ ಟೇಶ್, ಬೆಂಗಳೂರು ನಗರಾಧ್ಯಕ್ಷ ಎಂ.ಪಿ. ಮಂಜುನಾಥ್, ಮೊಗವೀರ ಮಹಾಜನ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಿ.ಎಲ್. ಶಂಕರನಾಥ್, ಜನಾರ್ದನ್, ಜಿ. ಪುಟ್ಟಪ್ಪ ಉಪಸ್ಥಿತರಿದ್ದರು.ಇದೆ ವೇಳೆ ಜಮ್ಮಲದಿನ್ನಿಯ ಬಿ.ಎಂ. ಸುರೇಶ್ ಗವಾಯಿಗಳ ತಂಡದಿಂದ ನಡೆದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.29 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಉದ್ಘಾಟಿಸಿದರು. ಎಸ್. ಚಂದ್ರಶೇಖರ್, ಕೆ.ಎಂ. ಧನಂಜಯ, ಸಿ.ಆರ್. ಲೋಕೇಶಪ್ಪ, ಡಾ. ಕೃಷ್ಣಯ್ಯ ಇದ್ದರು.