ಕೆಪಿಎಸ್ಸಿ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕೆಪಿಎಸ್ಸಿ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು. ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು ಎಂಬ ಕಾರಣಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆಯನ್ನು ಕೇಳಿ ಪಡೆದರು. ಹಾಗೆಯೇ ತಮ್ಮ ಪಕ್ಷ ಆಡಳಿತ ಮಾಡುತ್ತಿರುವ ಕರ್ನಾಟಕ ರಾಜ್ಯದಲ್ಲಿ ಆಗಿರುವ ಕೆಪಿಎಸ್ಸಿ ಹಗರಣದಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಯನ್ನೂ ಸಹ ರಾಹುಲ್ ಗಾಂಧಿ ಕೇಳಿ ಪಡೆಯಲಿ. ಕೂಡಲೇ ರಾಜೀನಾಮೆ ನೀಡಿ ಎಂದು ಡಿ.ಕೆ.ಶಿವಕುಮಾರ್ ಗೆ ಆದೇಶಿಸಲಿ ಎಂದು ಕೃಷ್ಣಪ್ಪ ಆಗ್ರಹಿಸಿದರು. ಕಾಂಗ್ರೆಸ್ಸಿಗರು ದ್ವಂದ್ವ ನಿಲುವನ್ನು ತಾಳಬಾರದು. ಎಲ್ಲರಿಗೂ ಒಂದೇ ನ್ಯಾಯ. ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿ ಸಂಬಂಧಪಟ್ಟವರನ್ನು ಜೈಲಿಗೆ ಕಳಿಸಲಾಗಿದೆ. ಆದರೆ ಇಲ್ಲಿ ಕೆಪಿಎಸ್ಸಿ ಯಲ್ಲಿ ಹಗರಣ ಮಾಡಿದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇವರ ಇಬ್ಬಗೆ ನೀತಿ ಜಗಜ್ಜಾಹೀರಾಗಿದೆ ಎಂದು ವ್ಯಂಗ್ಯವಾಡಿದರು. ಈ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ, ಧರಣಿ ನಡೆಸುತ್ತಿದ್ದ ವೇಳೆಯೂ 35ಕ್ಕೂ ಹೆಚ್ಚು ಮಸೂದೆಗಳನ್ನು ಜಾರಿಗೊಳಿಸಿರುವುದು ಖೇದದ ಸಂಗತಿ. ಈ ತೀರ್ಮಾನವನ್ನು ಕಾಂಗ್ರೆಸ್ ಪಕ್ಷದ ಸಭೆಯಲ್ಲೇ ಮಾಡಿಕೊಳ್ಳಬಹುದಿತ್ತು. ಚರ್ಚೆಯೇ ಇಲ್ಲದೇ ಮಸೂದೆ ಅಂಗೀಕಾರವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದರು. ಭ್ರಷ್ಠಾಚಾರದ ಆರೋಪ ಹೊತ್ತಿದ್ದ ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷಗಳು ವಿಧಾನಸಭಾ ಕಲಾಪಕ್ಕೆ ಬಹಿಷ್ಕಾರ ಮಾಡಿದ್ದವು. ವಿಧಾನಸಭಾ ಅಧಿವೇಶನ ಸಂಪೂರ್ಣಗೊಂಡ ನಂತರ ನಾಗೇಂದ್ರ ರಾಜೀನಾಮೆ ನೀಡಿರುವುದು ಹಾಸ್ಯಾಸ್ಪದ. ಅಧಿವೇಶನಕ್ಕೆ ಮೊದಲೇ ತಮ್ಮ ರಾಜೀನಾಮೆ ನೀಡಿದ್ದರೆ, ವಿಧಾನಸಭಾ ಕಲಾಪ ಸುಸೂತ್ರವಾಗಿ ನಡೆಯುತ್ತಿತ್ತು. ಈ ಅಧಿವೇಶನಕ್ಕೆ ಕೋಟ್ಯಂತರ ರುಪಾಯಿ ವ್ಯಯವಾಗಿದೆ. ಭೀಕರ ಬರಗಾಲದ ನಡುವೆ ಜನರ ಹಣ ಹಾಳು ಮಾಡಿದ್ದು ಎಷ್ಟು ಸರಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರಶ್ನಿಸಿದರು.ತುರುವೇಕೆರೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಪ್ರತಿ ಎಕರೆ ರಾಗಿ ಬೆಳೆಗೆ ಸರ್ಕಾರ ಕನಿಷ್ಠ 50 ಸಾವಿರ ರುಗಳ ಪರಿಹಾರವನ್ನು ನೀಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರವನ್ನು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜೆ ಡಿ ಎಸ್ ಮುಖಂಡರಾದ ತ್ಯಾಗರಾಜು, ವಿಜಯೇಂದ್ರ, ಎನ್. ಆರ್.ಸುರೇಶ್, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಮುನಿಯೂರು ರಂಗಸ್ವಾಮಿ, ಮಾದಿಹಳ್ಳಿ ಕಾಂತರಾಜು, ತೊರೆಮಾವಿನಹಳ್ಳಿ ರಾಮಕೃಷ್ಣ, ಹುಲಿಕಲ್ ಶಂಕರೇಗೌಡ, ಟೌನ್ ಬ್ಯಾಂಕ್ ಅಧ್ಯಕ್ಷ ರಂಗನಾಥ್, ಪರಮೇಶ್ವರ್, ಕಲ್ಕೆರೆ ನಂಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.