ನಿರುದ್ಯೋಗಿಗಳ ಭವಿಷ್ಯಕ್ಕಾಗಿ ಮಾರ್ಗ ಸಂಸ್ಥೆ

| Published : Feb 12 2024, 01:30 AM IST

ಸಾರಾಂಶ

ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರು ಹಣ ಕೇಳಲಿಲ್ಲ, ಬದಲಾಗಿ ಮಕ್ಕಳಿಗೆ ಉದ್ಯೋಗ ನೀಡಿ ಎಂದು ಕೇಳುತ್ತಿದ್ದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ರಾಜ್ಯ ಸರ್ಕಾರದ ಸ್ಕೀಲ್‌ ಕನೆಕ್ಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ದಾಖಲಿಸಿ, ಸುಲಭವಾಗಿ ಉದ್ಯೋಗ ಪಡೆಯಬಹುದು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವಿದ್ಯಾವಂತ ನಿರುದ್ಯೋಗಿ ಯುವಕರ ಉಜ್ವಲ ಭವಿಷ್ಯಕ್ಕಾಗಿ ಮಾರ್ಗ ಸಂಸ್ಥೆ ಸ್ಥಾಪಿಸಿ, ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ನೀಡಬೇಕೆಂಬ ಮಹದಾಸೆ ಹೊಂದಲಾಗಿದೆ ಎಂದು ನಿವೃತ್ತ ಪ್ರಾದೇಶಿಕ ಆಯುಕ್ತ, ಸಂಸ್ಥೆಯ ಮುಖ್ಯಸ್ಥ ಎಂ.ಜಿ.ಹಿರೇಮಠ ಹೇಳಿದರು.

ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ಅಕ್ಕಮಹಾದೇವಿ ಮಹಿಳಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಬದುಕಿಗೆ ದಿಕ್ಸೂಚಿಯಾಗಿರುವ ಮಾರ್ಗ ಸಂಸ್ಥೆಯಿಂದ ನಡೆದ ಉಚಿತ ಉದ್ಯೋಗ ಮೇಳದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವಾ ನಿವೃತ್ತಿ ನಂತರ ನಮ್ಮ ಸ್ನೇಹಿತರು ಸೇರಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶದಿಂದ ಮಾರ್ಗ ಸಂಸ್ಥೆ ಸ್ಥಾಪಿಸಲಾಗಿದೆ. ಈ ಸಂಸ್ಥೆ ಮೂಲಕ ನಿರುದ್ಯೋಗ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗವುದು ಎಂದು ಭರವಸೆ ನೀಡಿದರು.

ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರು ಹಣ ಕೇಳಲಿಲ್ಲ, ಬದಲಾಗಿ ಮಕ್ಕಳಿಗೆ ಉದ್ಯೋಗ ನೀಡಿ ಎಂದು ಕೇಳುತ್ತಿದ್ದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ರಾಜ್ಯ ಸರ್ಕಾರದ ಸ್ಕೀಲ್‌ ಕನೆಕ್ಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ದಾಖಲಿಸಿ, ಸುಲಭವಾಗಿ ಉದ್ಯೋಗ ಪಡೆಯಬಹುದು. ಅಲ್ಲದೇ ಗ್ರಾಮೀಣ ಭಾಗದ ಯುವಕರು ಬಾವಿಯಲ್ಲಿನ ಕಪ್ಪೆ ಆಗಿರದೇ ಇಂಟರನ್ಯಾಶನಲ್ ಮ್ಯಾಗ್ರೆಶಿಯನ್ ಮೂಲಕ ದೇಶ ವಿದೇಶಗಳಲ್ಲೂ ಉದ್ಯೋಗ ಮಾಡಬಹುದು. ಯುರೋಪ ಖಂಡದ ಹಂಗೇರಿ ದೇಶಕ್ಕೆ ಸುಮಾರು 150 ಚಾಲಕರು ಬೇಕಾಗಿದ್ದಾಗ ಇಂಟರನ್ಯಾಶನಲ್ ಮ್ಯಾಗ್ರೆಶಿಯನ್ ಮೂಲಕ ತಮ್ಮ ಸ್ವ ವಿವರವನ್ನು ಸಲ್ಲಿಸಿ ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ ರಾಜ್ಯ, ಹೋರರಾಜ್ಯದಿಂದ ಸುಮಾರು 40ಕ್ಕೂ ಹೆಚ್ಚು ಸಂಸ್ಥೆಗಳು ಆಗಮಿಸಿದ್ದು, ಅಭ್ಯರ್ಥಿಗಳು ತಮ್ಮ ಸ್ವ ವಿವರವನ್ನು ಸಲ್ಲಿಸಿಬೇಕೆಂದರು. ಉದ್ಯೋಗ ಮೇಳ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪ್ರಾಚಾರ್ಯ ಡಾ.ಸಿ.ಬಿ. ಗಣಾಚಾರಿ, ಬಿ.ಬಿ.ಗಣಾಚಾರಿ, ಶಂಕರ ಮಾಡಲಗಿ, ದತ್ತಾತ್ರೇಯ ಮಿಸಾಳೆ ಮಾತನಾಡಿ, ಎಂ.ಜಿ.ಹಿರೇಮಠ ಅವರು ತಮ್ಮ ಸೇವಾ ಅಧಿಕಾರದ ಅವಧಿಯ ವಯೋನಿವೃತ್ತಿ ನಂತರ ಐಷಾರಾಮಿ ಜೀವನ ಸಾಗಿಸಬಹುದಾಗಿತ್ತು. ಆದರೆ, ಅಧಿಕಾರದ ಅವಧಿಯಲ್ಲಿ ಜನತೆಯ ಕಷ್ಟ ಅರಿತು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಬದುಕಿಗೆ ದಿಕ್ಸೂಚಿಯಾಗಿರುವ ಮಾರ್ಗ ಸಂಸ್ಥೆ ಹುಟ್ಟು ಹಾಕಿ ಹಲವಾರು ಕಂಪನಿಗಳನ್ನು ಆಹ್ವಾನಿಸಿ, ಗ್ರಾಮೀಣ ಭಾಗದ ಯುವಕರಿಗೆ ಉಚಿತ ಉದ್ಯೋಗ ಮೇಳ ಏರ್ಪಡಿಸಿ ಉದ್ಯೋಗ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿದರು. ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕ ಜಿ.ಎಸ್.ಕೋರಸಗಾಂವ, ಸ್ಕಿಲ್‌ ಡೆವಲ್ಪಮೆಂಟ್ ಅಧಿಕಾರಿ ನಾಗರಾಜ ಹಂಚಿನಮನಿ ಇದ್ದರು. ಈ ವೇಳೆ ಸುಮಾರು 40 ಕ್ಕೂ ಹೆಚ್ಚು ಕಂಪನಿಯ ಮುಖ್ಯಸ್ಥರು, ನೂರಾರು ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೋಟ್..

ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರು ಹಣ ಕೇಳಲಿಲ್ಲ, ಬದಲಾಗಿ ಮಕ್ಕಳಿಗೆ ಉದ್ಯೋಗ ನೀಡಿ ಎಂದು ಕೇಳುತ್ತಿದ್ದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ರಾಜ್ಯ ಸರ್ಕಾರದ ಸ್ಕೀಲ್‌ ಕನೆಕ್ಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ದಾಖಲಿಸಿ, ಸುಲಭವಾಗಿ ಉದ್ಯೋಗ ಪಡೆಯಬಹುದು. ಅಲ್ಲದೇ ಗ್ರಾಮೀಣ ಭಾಗದ ಯುವಕರು ಬಾವಿಯಲ್ಲಿನ ಕಪ್ಪೆ ಆಗಿರದೇ ಇಂಟರನ್ಯಾಶನಲ್ ಮ್ಯಾಗ್ರೆಶಿಯನ್ ಮೂಲಕ ದೇಶ ವಿದೇಶಗಳಲ್ಲೂ ಉದ್ಯೋಗ ಮಾಡಬಹುದು.

ಎಂ.ಜಿ.ಹಿರೇಮಠ. ಮಾರ್ಗ ಸಂಸ್ಥೆಯ ಮುಖ್ಯಸ್ಥ