ಮೆಕಾಲೆ ಶಿಕ್ಷಣ ಪದ್ಧತಿಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ: ರಾಜೇಶ್ವರ ಶಿವಾಚಾರ್ಯರು

| Published : Dec 19 2024, 12:31 AM IST

ಮೆಕಾಲೆ ಶಿಕ್ಷಣ ಪದ್ಧತಿಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ: ರಾಜೇಶ್ವರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೋತ್ಥಾನ ಪರಿಷತ್‌, ಪ್ರಶಿಕ್ಷಣ ಭಾರತಿ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ಸಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಮೆಕಾಲೆ ಶಿಕ್ಷಣ ಪದ್ಧತಿಯಿಂದ ಶ್ರೇಷ್ಠ ಭಾರತೀಯ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ತಡೋಳಾದ ರಾಜೇಶ್ವರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.ಅವರು ರಾಷ್ಟ್ರೋತ್ಥಾನ ಪರಿಷತ್‌, ಪ್ರಶಿಕ್ಷಣ ಭಾರತಿ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ಸಹ ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಮೆಕಾಲೆ ಶಿಕ್ಷಣ ಪದ್ಧತಿಯಿಂದಾಗಿ ಆದರ್ಶ ಮಕ್ಕಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬ ಪ್ರೀತಿ ಮಾಯವಾಗುತ್ತಿದೆ. ವಿಲಾಸಿ ಬದುಕಿನ ಅಪೇಕ್ಷೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ಇಂದು ದೇಶದಲ್ಲಿ ಅನ್ನ, ವಸ್ತ್ರಕ್ಕೆ ಬರವಿಲ್ಲ. ಜ್ಞಾನಕ್ಕೂ ಕೊರತೆ ಇಲ್ಲ. ಆದರೆ, ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಇದಕ್ಕೆ ಕಾರಣ ಮೆಕಾಲೆ ಶಿಕ್ಷಣ ಪದ್ಧತಿ ಎಂದು ನುಡಿದರು.ಮಕ್ಕಳಿಗೆ ಬದುಕಿನ ಮೌಲ್ಯ ಹೇಳಿಕೊಡುವ, ದುಡಿಮೆ, ಕಷ್ಟ ಮನವರಿಕೆ ಮಾಡಿಕೊಡುವ, ಕೌಶಲಕ್ಕೆ ಉತ್ತೇಜಿಸುವ, ಗುರು- ಹಿರಿಯರನ್ನು ಗೌರವಿಸುವ ಸಂಸ್ಕಾರಯುತ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.‘ಪ್ರಚಲಿತ ವಿದ್ಯಮಾನದಲ್ಲಿ ಶಿಕ್ಷಣ ವ್ಯವಸ್ಥೆ’ ಕುರಿತು ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಅಶೋಕ ಹಂಚಲಿ ಅವರು, ಸಮೃದ್ಧ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ಭವ್ಯ ಭಾರತದ ಪರಿಚಯ ಮಾಡಿಕೊಡಬೇಕು. ನೈತಿಕ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡಬೇಕು ಎಂದು ಹೇಳಿದರು.ಪಂಚಮುಖಿ ಶಿಕ್ಷಣ ಕುರಿತು ಧಾರವಾಡದ ವಿನಾಯಕ ಭಟ್‌ ಶೇಡಿಮನೆ, ಆದರ್ಶ ಶಿಕ್ಷಕ ಕುರಿತು ಉತ್ತರ ಕನ್ನಡದ ಪ್ರೊ.ಎಂ.ಎನ್‌.ಹೆಗಡೆ ಉಪನ್ಯಾಸ ನೀಡಿದರು.ಬೀದರ್‌ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ ಉದ್ಘಾಟಿಸಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ರಾಮಕೃಷ್ಣ ಸಾಳೆ, ಓಂಕಾರ ಮಾಶೆಟ್ಟಿ, ರಾಷ್ಟ್ರೋತ್ಥಾನ ಪರಿಷತ್‌ ಜಿಲ್ಲಾ ಸಂಯೋಜಕ ಶಿವಶರಣು ಚಾಂಬೋಳೆ, ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಅಧ್ಯಕ್ಷ ನಾಗೇಶ ಸ್ವಾಮಿ ಮಸ್ಕಲ್‌ ಉಪಸ್ಥಿತರಿದ್ದರು.ಡಾ.ಶ್ರೇಯಾ ಮಹೇಂದ್ರಕರ ನಿರೂಪಿಸಿದರು. ಜಿಲ್ಲೆಯ ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳು ಪಾಲ್ಗೊಂಡಿದ್ದರು.