ಚಿತ್ರದುರ್ಗ ಮುರುಘಾಮಠದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

12ನೇ ಶತಮಾನದಲ್ಲಿ ಕೇವಲ ಧರ್ಮಾಚರಣೆ, ತತ್ವಬೋಧನೆಯ ಕೆಲಸ ಆಗಲಿಲ್ಲ. ಅಲ್ಲಿ ಬಹುದೊಡ್ಡ ಕಾಯಕ ಚಳುವಳಿಯೇ ನಡೆಯಿತು. ಬೆವರಿನ ಶ್ರಮದಿಂದಲೇ ಉಣ್ಣುವ ಸಂಸ್ಕೃತಿಯನ್ನು ಹುಟ್ಟು ಹಾಕಿದ ಆ ಚಳುವಳಿಯಲ್ಲಿ ವಚನ ಸಂಸ್ಕೃತಿಯನ್ನು, ವಚನಗಳನ್ನು ಉಳಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿದ್ದ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನುಭವ ಮಂಟಪದಲ್ಲಿ ಬಸವಾದಿ ಶಿವಶರಣರು ಕಂದಾಚಾರ, ಲಿಂಗ ಅಸಮಾನತೆ, ಅಂತರ್ಜಾತಿ ವಿವಾಹ, ದೇವರ ಪರಿಕಲ್ಪನೆ ಹೀಗೆ ಹತ್ತಾರು ನೂರಾರು ವಿಷಯಗಳನ್ನು ಚರ್ಚಿಸುತ್ತಿದ್ದರು. ಅಂತರ್ಜಾತಿ ವಿವಾಹ ಕ್ರಾಂತಿಗೆ ಕಾರಣವಾಯಿತು. ಶೋಷಣೆಯ ವಿರುದ್ಧ ಮೆಟ್ಟಿನಿಂತ ಶರಣರನ್ನು ಹತ್ಯೆ ಮಾಡಲಾಯಿತು. ತನ್ನ ಪ್ರಾಣವನ್ನು ಬಲಿಕೊಟ್ಟಾದರೂ ಸಮಸಮಾಜ ಅರ್ಥಾತ್ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ರಚಿಸಿದ ಅಮೂಲ್ಯ ವಚನಸಾಹಿತ್ಯ ಹಾಳಾಗಲು ಬಿಡಬಾರದೆಂಬ ಆಶಯದಿಂದ ಶತೃಗಳಿಂದ ಉಳಿಸುವ ಪ್ರಯತ್ನ ಮಾಡಿದ ಶರಣರಲ್ಲಿ ಮಾಚಿದೇವರು ಅಗ್ರಗಣ್ಯರು ಎಂದರು.

ಮಡಿವಾಳ ಮಾಚಿದೇವರ ಶರಣರ ಬಗ್ಗೆ ವಿಷಯಾವಲೋಕನ ಮಾಡಿದ ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಅನುಭವ ಮಂಟಪದ ಕಲ್ಯಾಣ ಪುರಕ್ಕೆ ವಿಜಯಪುರ ಜಿಲ್ಲೆಯಿಂದ ಮಡಿವಾಳ ಮಾಚಿದೇವರು ಆಗಮಿಸುತ್ತಾರೆ. ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದ ಕಠಿಣ ನಿಲುವಿನ, ಮೃದು ಮನದ, ಶಿವಶರಣರನ್ನು ಕಂಡರೆ ವಿನಯ ತೋರಿಸುತ್ತಿದ್ದ ಮಾಚಿದೇವರು ಸಮಾಜಕ್ಕೆ ಎಚ್ಚರ ಎನ್ನುವ ನೂರಾರು ವಚನಗಳನ್ನು ರಚಿಸಿದ್ದಾರೆ ಎಂದರು.

ತಾನು ಮಡಿ ಮಾಡಿ ತಂದ ಬಟ್ಟೆಗಳನ್ನು ಮೈಗಳ್ಳರು, ಲೋಭಿಗಳು, ಪೋಲಿಗಳು ಮುಟ್ಟಬಾರದೆಂಬ ಧೀರೋದಾತ್ತ ನಿಲುವಿನವರಾಗಿದ್ದರು. ಮಹಾಗಣಾಚಾರಿ ಪ್ರವೃತ್ತಿಯವರು. ಶರಣರ ಕೆಲಸಕ್ಕೆ ಅಡ್ಡಿಪಡಿಸಿದವರನ್ನು ಸುಮ್ಮನೆ ಬಿಡುವ ಪ್ರವೃತ್ತಿಯವರಲ್ಲ ಮಾಚಿದೇವರು. ಹಾಗೆಯೇ ಮಾಚಿದೇವರು ಅರಸೊತ್ತಿಗೆಗೂ ಸವಾಲಾಗಿದ್ದರು. ಅರಸರು ಮೇಲಲ್ಲ, ಅಗಸತನ ಕೀಳಲ್ಲ ಎನ್ನುವಂತಹ ಶೋಷಣೆಯ ವಿರುದ್ಧ ಹೋರಾಟ ಮಾಡಿದರೆಂದು ತಿಳಿಸಿದರು.

ಅನುಭವ ಮಂಟಪ ಎನ್ನುವ ಬೃಹತ್ ಪರಾಮರ್ಶೆಯ ಆಲಯವನ್ನು ಪ್ರವೇಶ ಮಾಡಬೇಕಾದರೆ ಮಾಚಿದೇವರ ಅಪ್ಪಣೆ ಬೇಕಿತ್ತು. ಅನುಭವ ಮಂಟಪ ಎನ್ನುವ ಸಾವಿರ ದೀಪದ ಜ್ಞಾನದ ಮನೆಯಲ್ಲಿ ಮಾಚಿದೇವರದ್ದು ಜ್ಞಾನ ಭಂಡಾರಿಗಳನ್ನು ಅನುಭವ ಸಾಂದ್ರತೆಯುಳ್ಳವರನ್ನು ಪರಾಮರ್ಶಿಸುವ ಕೆಲಸವಾಗಿತ್ತು. ಅವರು ಯಾರನ್ನೂ ಹಾಗೆಯೇ ಬಿಟ್ಟವರಲ್ಲ. ಅರಸರ ಬಟ್ಟೆಗಳನ್ನು ಮಡಿ ಮಾಡಲು ಒಪ್ಪಲಿಲ್ಲ. ಹೆದರಿಸಿ ಬೆದರಿಸಿದರೂ ಬಿಜ್ಜಳ ಇತರ ಅರಸರ ಬಟ್ಟೆಗಳನ್ನು ತೊಳೆಯಲು ಇಷ್ಟಪಡಲಿಲ್ಲ. ನಮ್ಮ ಶರಣರ ಬಟ್ಟೆಯನ್ನಷ್ಟೇ ಶುಚಿಗೊಳಿಸುವುದಾಗಿ ಹೇಳುತ್ತಿದ್ದರು ಎಂದರು.

ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರಾಮಪ್ಪ ಸೇರಿದಂತೆ ಪ್ರಕಾಶ್ ಎನ್., ನಿಂಗಪ್ಪ.ಎನ್, ರಂಗಪ್ಪ, ಜಯಣ್ಣ, ರುದ್ರಮುನಿಯಪ್ಪ, ಚೈತ್ರ, ಮಾಚಿದೇವ ಮಲಿಗೆಮ್ಮ ಮಹಿಳಾ ಸಂಘದ ಅಧ್ಯಕ್ಷೆ ರಂಗಮ್ಮ, ಕಾರ‍್ಯದರ್ಶಿ ಸುಲೋಚನಮ್ಮ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ. ನಿರಂಜನಮೂರ್ತಿ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಡಾ. ದೊಡ್ಡಮಲ್ಲಯ್ಯ, ಬಸವರಾಜ ಕಟ್ಟಿ, ವಕೀಲರಾದ ಎನ್.ಬಿ. ವಿಶ್ವನಾಥ್, ಪ್ರಾಚಾರ್ಯ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.