ಮಾಚಿದೇವರ ವಚನ ಸಾಹಿತ್ಯ ಈಗಲೂ ಪ್ರಸ್ತುತ: ಶಾಸಕ ಜ್ಯೋತಿಗಣೇಶ್‌

| Published : Feb 02 2024, 01:00 AM IST

ಸಾರಾಂಶ

ತುಮಕೂರಿನಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿಶ್ವಗುರು ಬಸವಣ್ಣನವರ ಜೊತೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ವೀರ ಶರಣ ಮಡಿವಾಳ ಮಾಚಿದೇವರು ರಚಿಸಿರುವ ವಚನ ಸಾಹಿತ್ಯಗಳು ಈಗಲೂ ಪ್ರಸ್ತುತವಾಗಿವೆ. ಇಂತಹ ಶರಣರ ಜಯಂತಿಗಳು ಒಂದೇ ಸಮುದಾಯಕ್ಕೆ ಸೀಮಿತವಾಗಿರಬಾರದು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

ನಗರದ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಜಿಲ್ಲಾ ಮಡಿವಾಳ ಸಂಘ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಮಡಿವಾಳ ಮಾಚಿದೇವ ದೇವರ ವಚನಗಳನ್ನು ಹೆಚ್ಚು ಹೆಚ್ಚು ಓದಬೇಕು ಎಂದರು, ಶಿಕ್ಷಣಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮುದಾಯದವರು ಶಿಕ್ಷಣವಂತರಾಗಿ, ಆರ್ಥಿಕವಾಗಿ ಸದೃಢರಾದರೆ ಮಾತ್ರ ಜಾಗತಿಕ ಮಟ್ಟದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಾಂಪ್ರದಾಯಿಕ ಕುಲಕಸುಬಿನಲ್ಲಿ ಕಾಲಮಾನಕ್ಕೆ ತಕ್ಕಹಾಗೆ ಬದಲಾವಣೆಗಳನ್ನು ತಂದುಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಇದೇ ಸಂದರ್ಭದಲ್ಲಿ ನಗರದ ದೋಭಿಗಾಟ್‌ನಲ್ಲಿ ಮಡಿವಾಳ ಸಮುದಾಯಕ್ಕೆ ಅನುಕೂಲ ಆಗುವಂತಹ ಕಟ್ಟಡವನ್ನು ಕಟ್ಟಿಸಿ ಕೊಡುವ ಭರವಸೆ ನೀಡಿದರು.

ನಂತರ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ವೀರಣ್ಣ ಮಡಿವಾಳರ, ಮಡಿವಾಳ ಮಾಚಿದೇವ ಅವರನ್ನು ಬಸವಣ್ಣ, ಅಕ್ಕಮಹಾದೇವಿ ಮತ್ತು ಎಲ್ಲಾ ಶರಣರು ಮಾಚಿ ತಂದೆ ಎಂದು ಕರೆಯುತ್ತಿದ್ದರು. ಮಡಿವಾಳ ಸಮುದಾಯ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ, ಮಾಚಿದೇವರ ವಚನಗಳು, ಅವರ ಜೀವನವನ್ನು ನಾವು ನೆನೆಯಬೇಕು ಮತ್ತು ಅದರಂತೆ ನಡೆಯಬೇಕು ಎಂದರು.

ಶರಣರಲ್ಲಿ ಯುದ್ಧ ಕಲೆಯನ್ನು ಕಲಿತವರಲ್ಲಿ ಮಾಚಿದೇವರು ಒಬ್ಬರು, ಅದಕ್ಕಾಗಿಯೇ ಅವರನ್ನು ವೀರ ಮಡಿವಾಳ ಮಾಚಿದೇವ ಎಂದು ಕರೆಯುತ್ತಿದ್ದರು. ನಮ್ಮ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ತಿರುಕಪ್ಪ ಮಡಿವಾಳರ ಮತ್ತು ಗಾಡ್ಗೆ ಬಾಬಾ ನಂತರದಲ್ಲಿ ಸಮುದಾಯದ ಪರವಾದ ಗಟ್ಟಿ ಧ್ವನಿಗಳೇ ಇಲ್ಲದಾಗಿದೆ. ಸಂವಿಧಾನದ ಮೂಲಕ ರಾಜಕೀಯ, ಶಿಕ್ಷಣ, ಸಮಾಜಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಡಿವಾಳ ಸಮುದಾಯ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ನರಸಿಂಹರಾಜು, ಮಾಚಿದೇವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಾಂತಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ. ಎಂ. ರವಿಕುಮಾರ್‌, ಸಂಘದ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.