ಕಬ್ಬಾರೆ ಗ್ರಾಮದಲ್ಲಿ ಹುಚ್ಚು ನಾಯಿ ದಾಳಿ: 12 ಮಂದಿಗೆ ಗಾಯ

| Published : Aug 01 2025, 12:00 AM IST

ಸಾರಾಂಶ

ಹುಚ್ಚು ನಾಯಿ ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಾದ ಗಾಬರಿಯಿಂದ ವಾಹನ ಸವಾರರು ಕೂಡ ಅಡ್ಡಾದಿಡ್ಡಿಯಾಗಿ ಚಲಿಸಿ ಕೆಳಗೆ ಬಿದ್ದು ಕೈ ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಕೆ.ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹುಚ್ಚು ನಾಯಿ ಕಡಿತದಿಂದ ಮಕ್ಕಳು, ವೃದ್ಧರು, ಮಹಿಳೆಯರು ಸೇರಿ 12 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಜರುಗಿದೆ.

ಗ್ರಾಮದ ಬೋರಲಿಂಗಯ್ಯ, ರಾಜು, ಸಚ್ಚಿನ್, ಪುಟ್ಟಸ್ವಾಮಿ, ಚಿಕ್ಕತಾಯಮ್ಮ, ಧನುಶ್ರೀ, ಪುಟ್ಟೇಗೌಡ, ಆಶಾ, ಚಿಕ್ಕೊಳಮ್ಮ, ನಾಥಪ್ಪ, ಶಿವಲಿಂಗಯ್ಯ ಸೇರಿ ಇನ್ನೊಬ್ಬರಿಗೂ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ.

ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಗ್ರಾಮದಲ್ಲಿ ಕಾಣಿಸಿಕೊಂಡ ಹುಚ್ಚು ನಾಯಿ ರಸ್ತೆ ಬದಿ ಹೋಗುತ್ತಿದ್ದ ಜನರ ಮೇಲೆ ಮನ ಬಂದಂತೆ ದಾಳಿ ಮಾಡಿ ಕಚ್ಚುತ್ತಾ ಸಾಗಿದೆ. ಗ್ರಾಮದಲ್ಲೆಲ್ಲ ತಿರುಗಾಟ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ.

ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಾದ ಗಾಬರಿಯಿಂದ ವಾಹನ ಸವಾರರು ಕೂಡ ಅಡ್ಡಾದಿಡ್ಡಿಯಾಗಿ ಚಲಿಸಿ ಕೆಳಗೆ ಬಿದ್ದು ಕೈ ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರನ್ನು ಕೆ.ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ದೇಹದ ಕಾಲು ಸೇರಿದಂತೆ ವಿವಿಧ ಭಾಗಗಳಿಗೆ ನಾಯಿ ಕಚ್ಚಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಡಾ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮತ್ತೆ ಕೆಲವರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನು ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳೀಯರು ನಾಯಿಯನ್ನು ಕೊಲ್ಲಲು ಪ್ರಯತ್ನಿಸಿದಾಗ ಅದು ತಪ್ಪಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಪಂ ಸದಸ್ಯ ರಾಘವೇಂದ್ರ ಮಾತನಾಡಿ, ಬೀದಿ ನಾಯಿಗಳು ಮತ್ತು ಹುಚ್ಚು ನಾಯಿ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ಮಕ್ಕಳು ಮತ್ತು ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾದ ವಾತಾವರಣ ಇದೆ. ತಕ್ಷಣವೇ ಸಂಬಂಧ ಪಟ್ಟ ಇಲಾಖೆಯವರು ನಾಯಿ ಸೆರೆ ಹಿಡಿಯಬೇಕೆಂದು ಎಂದು ಆಗ್ರಹಿಸಿದ್ದಾರೆ.

ಇಂದು ಸಮವಸ್ತ್ರ, ನೋಟ್ ಬುಕ್ ವಿತರಣೆ

ಮಳವಳ್ಳಿ: ತಾಲೂಕಿನ ಕಿರುಗಾವಲು ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ಆ.1ರಂದು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ, ಉಚಿತ ಸಮವಸ್ತ್ರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮವನ್ನು ಭಾರತೀ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಗೋಪಾಲಕೃಷ್ಣ ಉದ್ಘಾಟಿಸುವರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ರಾಚಪ್ಪಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಕೆ.ಎಂ.ಬಾಲಚಂದ್ರ ಹಾಗೂ ನೋಟ್ ಬುಕ್ ಗಳನ್ನು ಹೊಸಕೊಪ್ಪಲಿನ ತಿಬ್ಬಣ್ಣ ವಿತರಿಸಲಿದ್ದಾರೆ. ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯೆ ಸುಜಾತಾ ಕೆ.ಎಂ.ಪುಟ್ಟು ಹಾಗೂ ಪತ್ರಕರ್ತ ಟಿ.ಕೆ.ಲಿಂಗರಾಜು ಭಾಗವಹಿಸಲಿದ್ದಾರೆ ಎಂದು ಉಪನ್ಯಾಸಕ ಬಸವಲಿಂಗೇಗೌಡ ತಿಳಿಸಿದ್ದಾರೆ.