ಸಾರಾಂಶ
ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗೆಲಲ್ಲ ನೀರು ನಿಲ್ಲುವ ತಾಣವಾಗಿತ್ತು, ಅಲ್ಲದೆ ರಸ್ತೆ ಬಹುತೇಕ ಹಾಳಾಗಿತ್ತು. ಈ ಹಿನ್ನೆಲೆ ಮಡಹಳ್ಳಿ ಸರ್ಕಲ್ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೋಮವಾರ ಬೆಳಗ್ಗೆ 11 ಗಂಟೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗೆಲಲ್ಲ ನೀರು ನಿಲ್ಲುವ ತಾಣವಾಗಿತ್ತು, ಅಲ್ಲದೆ ರಸ್ತೆ ಬಹುತೇಕ ಹಾಳಾಗಿತ್ತು. ಈ ಹಿನ್ನೆಲೆ ಮಡಹಳ್ಳಿ ಸರ್ಕಲ್ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೋಮವಾರ ಬೆಳಗ್ಗೆ 11 ಗಂಟೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.ಅಪೆಂಡಿಕ್ಸ್ ಇ- 5054 ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ₹2 ಕೋಟಿ ಅನುದಾನದಲ್ಲಿ ಮಡಹಳ್ಳಿ ಸರ್ಕಲ್‌ನಿಂದ ಸುಮಾರು 800 ಮೀ. ರಸ್ತೆ ಡಾಂಬರೀಕರಣವಾಗಲಿದೆ. ರಸ್ತೆಯ ಎರಡು ಬದಿ ತಲಾ 800 ಮೀ. ಉದ್ದದ 7 ಮೀ. ಆಗಲದ ರಸ್ತೆ, ಎರಡು ಬದಿ ಚರಂಡಿ ಆಗಲಿದೆ.
ಲೋಕೋಪಯೋಗಿ ಸಹಾಯಕ ಕಾರ್ಯ ಪಾಲಕ ರವಿಕುಮಾರ್ ಮಾತನಾಡಿ, ಮಳೆ ಬಂದಾಗಲೆಲ್ಲ ಮಳೆ ನೀರು ನಿಲ್ಲುವ ಜಾಗದಲ್ಲಿ 13 ಮೀ. ಡೆಕ್ ಕೂಡ ನಿರ್ಮಾಣವಾಗಲು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ₹2 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇ ಕಾರಣ ಎಂದು ಮಾಹಿತಿ ನೀಡಿದರು. ₹2 ಕೋಟಿ ವೆಚ್ಚದ ರಸ್ತೆ, ಚರಂಡಿ, ಡೆಕ್ ಕಾಮಗಾರಿ ಮುಗಿಸಲು ಕನಿಷ್ಟ ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಕಾಮಗಾರಿ ಬೇಗ ಮುಗಿಸಲು ಶಾಸಕರು ಕೂಡ ಸೂಚನೆ ನೀಡಿದ್ದಾರೆ ಎಂದರು.ಸರ್ಕಲ್ ಅಲ್ಲ, ಚಿಕ್ಕ ಕೆರೆ: ಪಟ್ಟಣದಲ್ಲಿ ಮಳೆ ಬಂದಾಗಲೆಲ್ಲ ಮಡಹಳ್ಳಿ ಸರ್ಕಲ್ ತುಂಬೆಲ್ಲ ನೀರು ನಿಂತು ಕೆರೆಯಂತಾಗುತ್ತಿತ್ತು. ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿತ್ತು. ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ವಲಯ ಅರಣ್ಯ ಕಚೇರಿ, ನ್ಯಾಯಾಲಯ, ಜೆಎಸ್‌ಎಸ್ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಜೊತೆಗೆ ಬರಗಿ ಗ್ರಾಮಕ್ಕೆ ತೆರಳಲು ಪ್ರಮುಖ ರಸ್ತೆ ಇದಾಗಿತ್ತು.
ಜನರು, ಸವಾರರ ಹಿತದೃಷ್ಠಿಯಿಂದ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸ್ಪಂದಿಸಿ ಮಡಹಳ್ಳಿ ಸರ್ಕಲ್ ಹಾಗು ರಸ್ತೆಗೆ ಕಾಯಕಲ್ಪಕ್ಕೆ ಮುಂದಾಗಿದ್ದಾರೆ ಇದು ಜನತೆಗೆ ಮೆಚ್ಚುವ ಕೆಲಸ ಮಾಡಿದ್ದಾರೆ.ಹತ್ತಾರು ವರದಿ ಪ್ರಕಟ:ಮಡಹಳ್ಳಿ ಸರ್ಕಲ್ ಹಾಗು ಅದ್ವಾನವಾಗಿ ಹೋಗಿದ್ದ ಬಗ್ಗೆ ಕನ್ನಡಪ್ರಭ ಹತ್ತಾರು ವರದಿಗಳನ್ನು ಪ್ರಕಟಿಸಿ ತಾಲೂಕು ಆಡಳಿತ ಹಾಗು ಸ್ಥಳೀಯ ಶಾಸಕರ ಗಮನಕ್ಕೆ ತರುವ ಕೆಲಸ ಮಾಡಿದೆ.