ಯದುವೀರ್ ಬೆಂಬಲಿಸಲು ಬಿಜೆಪಿ ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶದಲ್ಲಿ ನಿರ್ಣಯ

| Published : Mar 25 2024, 12:46 AM IST

ಯದುವೀರ್ ಬೆಂಬಲಿಸಲು ಬಿಜೆಪಿ ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶದಲ್ಲಿ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ರಾಜರು ಮಾಡಿರುವ ಕಲ್ಯಾಣದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅವರು ಭಾರತವನ್ನು ಸುವರ್ಣ ಉತ್ತಂಗತ್ತ ಕೊಂಡೊಯ್ಯುತ್ತಿದ್ದು, ಮೈಸೂರು ಕೂಡ ಆ ಪ್ರಯೋಜನ ಪಡಯುವುದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.ಮೈಸೂರು ಅರಮನೆ ಮತ್ತು ನಾಯಕ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಅರಮನೆಗೆ ಬೆಂಕಿ ಬಿದ್ದಾಗ ನಾಯಕ ಸಮಾಜದವರು ರಕ್ಷಿಸಿದರೆಂಬುದು ಗೊತ್ತಿದೆ. ಚಾಮುಂಡಿಬೆಟ್ಟದಲ್ಲಿ ತೇರು ಎಳೆಯುವವರು ನಾಯಕ ಸಮಾಜ. ಹಾಗಾಗಿ, ಈ ಸಮುದಾಯ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಾಗುವುದು

ಕನ್ನಡಪ್ರಭ ವಾರ್ತೆ ಮೈಸೂರು

ಪರಿವಾರ, ತಳವಾರ ಸಮಸ್ಯೆ ಪರಿಹಾರ, ಮೀಸಲಾತಿ ಹೆಚ್ಚಿಸಿರುವ ಕಾರಣ ಈ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲಕ್ಕೆ ನಿಲ್ಲಲು ಬಿಜೆಪಿ ಎಸ್ಟಿ ಮುನ್ನಡೆ ಸಮಾವೇಶದಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಿತು.

ಲಕ್ಷ್ಮೀಪುರಂ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಪ.ಪಂಗಡ ಮುನ್ನಡೆ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಸತಿ ಶಾಲೆಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ನೀಡಿದೆ. ಸುಮಾರು 17 ಸಾವಿರ ಗ್ರಾಮಗಳು ಇದರ ಪ್ರೋಂಜನ ಪಡೆದಿವೆ. ಮುದ್ರಾ ಯೋಜನೆ ಮೂಲಕ ಹಲವು ಪರಿಶಿಷ್ಟರು ಉದ್ಯಮಿಗಳಾಗಿದ್ದಾರೆ. ಶೇ 50ಕ್ಕೂ ಹೆಚ್ಚು ಹಿಂದುಳಿದವರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

ಮೈಸೂರು ರಾಜರು ಮಾಡಿರುವ ಕಲ್ಯಾಣದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅವರು ಭಾರತವನ್ನು ಸುವರ್ಣ ಉತ್ತಂಗತ್ತ ಕೊಂಡೊಯ್ಯುತ್ತಿದ್ದು, ಮೈಸೂರು ಕೂಡ ಆ ಪ್ರಯೋಜನ ಪಡಯುವುದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಮೈಸೂರು ಅರಮನೆ ಮತ್ತು ನಾಯಕ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಅರಮನೆಗೆ ಬೆಂಕಿ ಬಿದ್ದಾಗ ನಾಯಕ ಸಮಾಜದವರು ರಕ್ಷಿಸಿದರೆಂಬುದು ಗೊತ್ತಿದೆ. ಚಾಮುಂಡಿಬೆಟ್ಟದಲ್ಲಿ ತೇರು ಎಳೆಯುವವರು ನಾಯಕ ಸಮಾಜ. ಹಾಗಾಗಿ, ಈ ಸಮುದಾಯ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.

ಪ.ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರ ಹನುಮಂತ ಮಾತನಾಡಿ, ಮೈಸೂರು- ಚಾಮರಾಜನಗರದಲ್ಲಿ ಪ.ಪಂಗಡ ಸಮುದಾಯವು ನಿರ್ಣಾಯಕವಾಗಿದ್ದರು. ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಈಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಟಿಪ್ಪು ಆರ್ಭಟ ನಿಯಂತ್ರಿಸಲು ಬಿಜೆಪಿಗೆ ಅಧಿಕಾರ- ಪ್ರತಾಪ್

ಹೈದರಾಲಿ ಮತ್ತು ಟಿಪುವಿನ ಆರ್ಭಟ ಮುಂದುವರಿಯಬಾರದು ಎಂದರೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು. ನಾಯಕ ಸಮುದಾಯವು ಮದಕರಿ ನಾಯಕ ಮತ್ತು ಒನಕೆ ಓಬವ್ವ ಅವರನ್ನು ಕೊಂದ ದುಷ್ಟರನ್ನು ಮರೆಯಬಾರದು. ಅಂತವರ ಕೈಗೆ ಅಧಿಕಾರ ನೀಡಬಾರದು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಪರಿವಾರ-ತಳವಾರ ಪ.ಪಂಗಡ ಸೇರ್ಪಡೆ ವಿಚಾರದಲ್ಲಿ ಮಾಜಿ ಸಂಸದ ದಿವಂಗತ ಶ್ರೀಕಂಠದತ್ತ ಚಾಮರಾಜ ಒಡೆಯರ್ ಆದಿಯಾಗಿ ಯಾವ ಸಂಸದರೂ ಮಾಡದ ಕೆಲಸವನ್ನು ನಾನು ಮಾಡಿದೆ ಎಂದರು.

1982 ರಿಂದಲೂ ಇದ್ದ ಪರಿವಾರ ಮತ್ತು ತಳವಾರ ಬೇಡಿಕೆಯನ್ನು ಈ ಭಾಗದ ಯಾವುದೇ ಸಂಸದರು ಪರಿಹರಿಸಲಿಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಸಿ.ಎಚ್. ವಿಜಯಶಂಕರ್, ಎಚ್. ವಿಶ್ವನಾಥ್ ಆದಿಯಾಗಿ ಯಾರೊಬ್ಬರೂ ಸಮಸ್ಯೆ ಪರಿಹರಿಸಲಿಲ್ಲ. ಆದರೆ, ನಾನು ಸಂಸದನಾಗಿ ಆಯ್ಕೆಯಾದ ನಾಲ್ಕೇ ವರ್ಷದಲ್ಲಿ ಸಮುದಾಯದ ಬೇಡಿಕೆ ಈಡೇರಿಸಿದೆ ಎಂದು ಅವರು ಹೇಳಿದರು.

ಸಮುದಾಯದವರ ಶೇ. 3ರ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸುವಲ್ಲಿಯೂ ಹೋರಾಟ ಮಾಡಿದ್ದೇನೆ. ಮದಕರಿ ನಾಯಕರ ಚರಿತ್ರೆಯನ್ನು ಸಂಸತ್ತಿನಲ್ಲಿಯೂ ಪ್ರಸ್ತಾಪಿಸಿ, ಇಡೀ ದೇಶಕ್ಕೆ ತಿಳಿಯುವಂತೆ ಮಾಡಿದೆ. ನಾನು ಸಂಸದನಾಗುವಲ್ಲಿಯೂ ನಾಯಕ ಸಮುದಾಯ ಬೆಂಬಲ ಸಾಕಷ್ಟಿದೆ. ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯ ಎಂದರು.

ಇಂದು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಯದುವೀರ್ ಚುನಾವಣೆಗೆ ನಿಂತಿದ್ದು, ಸಮುದಾಯವು ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನನ್ನದೇ ಪ್ರಮುಖ ಪಾತ್ರ. ಹೊರ ವರ್ತುಲ ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಕೆ, ಕೆ.ಆರ್. ಕ್ಷೇತ್ರದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಿ 2 ಲಕ್ಷ ಟನ್ಕಸ ಹೊರ ಹಾಕಿದೆ. ನನ್ನ ಹತ್ತು ವರ್ಷಗಳ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಮನಗಂಡು ಮತ ಹಾಕಬೇಕು ಎಂದು ಅವರು ಹೇಳಿದರು.

ಸಮಾವೇಶಕ್ಕೆ ಸುಣ್ಣದಕೇರಿ, ವೀರನಗೆರೆ, ತಿಲಕ್ ನಗರ, ಜಯನಗರ ಮೊದಲಾದ ಭಾಗಗಳಿಂದ ನಾಯಕ ಸಮುದಾಯದವರು ಆಗಮಿಸಿ ಬೆಂಬಲ ನೀಡುವ ಜತೆಗೆ ಯದುವೀರ್ ಪರವಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದರು. ಮದಕರಿನಾಯಕರ ಹೆಗ್ಗುರುತು ಕತ್ತಿಗುರಾಣಿಯನ್ನು ಯದುವೀರ್ ಅವರಿಗೆ ನೀಡಿ ಅಭಿನಂದಿಸಿದರು.

ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್, ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಎನ್. ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ಪ.ಪಂಗಡ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಮಾಜಿ ಮೇಯರ್ ಶಿವಕುಮಾರ್, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ನಗರಾಧ್ಯಕ್ಷ ಎಲ್. ನಾಗೇಂದ್ರ ಮೊದಲಾದವರು ಇದ್ದರು.