ಹಕ್ಕುಪತ್ರ ನೀಡುವಂತೆ ಮದಲಗಟ್ಟಿ ಗ್ರಾಮಸ್ಥರ ಆಗ್ರಹ

| Published : Jul 17 2025, 12:42 AM IST

ಹಕ್ಕುಪತ್ರ ನೀಡುವಂತೆ ಮದಲಗಟ್ಟಿ ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಿವೇಶನ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮದಲಗಟ್ಟಿ ಗ್ರಾಮದ ಮೂಲ ನಿವಾಸಿಗರು ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ನಿವೇಶನ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮದಲಗಟ್ಟಿ ಗ್ರಾಮದ ಮೂಲ ನಿವಾಸಿಗರು ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಎಂ.ಮಂಜುನಾಥ, ತಾಲೂಕಿನ ತುಂಗಭದ್ರಾ ನದಿ ತೀರದ ಮದಲಗಟ್ಟಿ ಗ್ರಾಮವು ಕಳೆದ 1992, 1993, 2007ರಲ್ಲಿ ನದಿಯ ನೆರೆ ಹಾವಳಿಗೆ ಹತ್ತಾರು ಬಾರಿ ತುತ್ತಾಗಿದೆ. ಆ ಸಂದರ್ಭದಲ್ಲಿ ಮನೆ ಮಠ ಕಳೆದುಕೊಂಡಿದ್ದೇವೆ. ಅರಭಾವಿ ಚಳಕೇರಿ ರಾಜ್ಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಹತ್ತಾರು ಮನೆಗಳನ್ನು ಒಡೆದು ಹಾಕಿದ್ದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದವು. ಆ ವೇಳೆ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.

ಮದಲಗಟ್ಟಿ ಮೂಲ ನಿವಾಸಿಗಳಿಗೆ ನಿವೇಶನ ಮತ್ತು ವಸತಿ ಕಲ್ಪಿಸುವ ಉದ್ದೇಶದಿಂದ ಗ್ರಾಮದ ಅನತಿ ದೂರದಲ್ಲಿ ಸ್ಥಳಾಂತರ ಮಾಡಿ ನವ ಗ್ರಾಮ ನಿರ್ಮಾಣ ಮಾಡಲಾಗಿದೆ. ಮೂಲ ಗ್ರಾಮಸ್ಥರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.

ಮದಲಗಟ್ಟಿ ಗ್ರಾಮಕ್ಕೆ ಕೂಲಿ ಅರಿಸಿ ಬಂದಿರುವ ಹತ್ತಾರು ಕುಟುಂಬಗಳು ಅನಧಿಕೃತವಾಗಿ, ನವಗ್ರಾಮದ ಮನೆಯಲ್ಲಿ ವಾಸವಾಗಿದ್ದಾರೆ. ಮೂಲ ಗ್ರಾಮದವರಿಗೆ ತಾಲೂಕು ಆಡಳಿತ ಈವರೆಗೂ ಹಕ್ಕುಪತ್ರಗಳನ್ನು ನೀಡದೇ ಮೂಲೆಗುಂಪು ಮಾಡಿದ್ದಾರೆ, ಆದರಿಂದ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆ ಹರಿಸಿ, ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿದ್ದಾರೆ.

ಮದಲಗಟ್ಟಿ ಮೂಲ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಿ ಹಕ್ಕುಪತ್ರ ನೀಡುವಲ್ಲಿ ವಿಳಂಬ ಧೋರಣೆ ತಾಳಿದರೇ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್‌ ಜಿ.ಸಂತೋಷಕುಮಾರ, ಈ ಕೂಡಲೇ ಎಲ್ಲ ಕುಟುಂಬಗಳನ್ನು ಸಮೀಕ್ಷೆ ಮಾಡಿ ಸೂಕ್ತ ನಿರ್ಧಾರ ಕೈಗೊಂಡು, ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳುತ್ತೇವೆಂದು ಹೇಳಿದರು.

ಬಿ.ಹನುಮಂತಪ್ಪ, ಸುಭಾಶಪ್ಪ, ರಾಮಪ್ಪ, ಆರ್‌.ಕುಮಾರ, ಕೆ.ಕೋಟೆಪ್ಪ, ಅಕ್ಕಮ್ಮ, ಮಲ್ಲಮ್ಮ, ಎಂ.ನಾಗರತ್ನ, ಮುಂಡರಗಿ ದ್ಯಾಮವ್ವ, ಡಿ.ರಂಗಪ್ಪ, ಕೆ.ಆನಂದ, ಬಾಲಪ್ಪ, ವನಜಾಕ್ಷಮ್ಮ, ಹನುಮಕ್ಕ, ಗಂಗಮ್ಮ, ಎಂ.ಲಕ್ಷ್ಣಣ ಸೇರಿದಂತೆ 50ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.