ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿಯ 12 ದಿನಗಳ ಜಾತ್ರಾ ಮಹೋತ್ಸವವು ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕಲ್ಯಾಣಿಯಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಬಳಿಕ ವಿಸರ್ಜನಾ ವಿಧಿ ನಡೆಯಿತು. ಇದಕ್ಕೂ ಮುನ್ನ ವಿಸರ್ಜನಾ ಮಹೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು-ತೋರಣ, ಬಾಳೆಕಂದು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿಯ 12 ದಿನಗಳ ಜಾತ್ರಾ ಮಹೋತ್ಸವವು ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಭಾದ್ರಪದ ಮಾಸದ ತದಿಗೆಯಂದು ನೂತನ ಶಿಲಾ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವಿಯು 12 ದಿನಗಳ ಕಾಲ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಸೇವೆಗಳನ್ನು ಸ್ವೀಕರಿಸಿದ ಬಳಿಕ ಊರ ಮುಂದಿನ ಕಲ್ಯಾಣಿಯಲ್ಲಿ ವಿಸರ್ಜನೆಗೊಂಡರು. ಶುಕ್ರವಾರ ಬೆಳಗ್ಗೆ ದೇವಾಲಯದ ಮುಂಭಾಗ ಚಂದ್ರಮಂಡಲೋತ್ಸವಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ಸ್ವರ್ಣಗೌರಮ್ಮ ದೇವಿಯನ್ನು ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು. ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವಣ್ಣನವರನ್ನೂ ಪಕ್ಕದಲ್ಲಿ ಕೂರಿಸಿ ಅರ್ಚಕರು ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ತಲೆಯ ಮೇಲೆ ದುಗ್ಗಲ ಹೊತ್ತು ಹರಕೆ ತೀರಿಸಿದರು. ಕರ್ಪೂರದ ಜ್ಯೋತಿಯ ಬೆಳಕಿನಲ್ಲಿ ಅಮ್ಮನವರ ದರ್ಶನ ಪಡೆದ ಭಕ್ತರು ಭಕ್ತಿಭಾವ ಮೆರೆದರು.ಬೆಳಗ್ಗೆ 11 ಗಂಟೆಗೆ ಪುಷ್ಪಾಲಂಕೃತ ಮಂಟಪವನ್ನು ಭಕ್ತರು ಹೊತ್ತುಕೊಂಡು ಮಡಿಲಕ್ಕಿ ಸೇವೆಗಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿದರು. ಉತ್ಸವ ಸಾಗಿದ ಮಾರ್ಗದುದ್ದಕ್ಕೂ ಮಹಿಳೆಯರು ನೀರು ಹಾಕಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಿ ಮಡಿಲಕ್ಕಿ ಸಮರ್ಪಿಸಿದರು. ಸಂಜೆ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕಲ್ಯಾಣಿಯಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಬಳಿಕ ವಿಸರ್ಜನಾ ವಿಧಿ ನಡೆಯಿತು. ಇದಕ್ಕೂ ಮುನ್ನ ವಿಸರ್ಜನಾ ಮಹೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು-ತೋರಣ, ಬಾಳೆಕಂದು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿ ಚೇತನ್ ಮರಿದೇವರು, ಐನಹಳ್ಳಿ ಪ್ರಶಾಂತ್ ದೇವರು, ಡಿವೈಎಸ್ಪಿ ಗೋಪಿ, ಪಿಎಸ್‌ಐ ಸುರೇಶ್, ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. 12 ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದಿಂದ ನಡೆದ ಸ್ವರ್ಣಗೌರಮ್ಮ ದೇವಿಯ ಜಾತ್ರಾ ಮಹೋತ್ಸವವು ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.