ಸಾರಾಂಶ
ಮದನ ಮೋಹನ ನಿಷ್ಠುರವಾದಿ ಆಗಿದ್ದರು. ವೃತ್ತಿಯ ವಿಷಯದಲ್ಲಿ ಯಾರ ಮುಲಾಜಿಗೂ ಒಳಗಾಗುತ್ತಿಲ್ಲ. ಹಾಗಾಗಿ ಅವರೆಂದರೆ ರಾಜಕಾರಣಿಗಳು, ಅಧಿಕಾರಿಗಳು ಹೆದರುತ್ತಿದ್ದರು. ಅವರು ಅನೇಕರನ್ನು ಬೆಳೆಸಿದ್ದಾರೆ.
ಹುಬ್ಬಳ್ಳಿ:
ನಾಡು, ನುಡಿ ರಕ್ಷಣೆ, ಕರ್ನಾಟಕದ ಅಭಿವೃದ್ಧಿಗೆ ಹಿರಿಯ ಪತ್ರಕರ್ತರಾಗಿದ್ದ ಮದನ ಮೋಹನ ಅವರ ಕೊಡುಗೆ ಅಪಾರ ಎಂದು ಮಾಜಿ ಮೇಯರ್ ಹನುಮಂತ ಡಂಬಳ ಅಭಿಮಾನ, ಗೌರವದಿಂದ ಸ್ಮರಿಸಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಧಾರವಾಡ ಘಟಕ ಸೋಮವಾರ ಸಂಜೆ ಇಲ್ಲಿನ ಭವಾನಿನಗರದ ಸುಜಯೀಂದ್ರ ಭವನದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಮದನ ಮೋಹನ, ಕೃಷ್ಣಾಚಾರ ನಾಗನೂರ, ಅಶೋಕ ಪಾಳಂದೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಮದನ ಮೋಹನ ನಿಷ್ಠುರವಾದಿ ಆಗಿದ್ದರು. ವೃತ್ತಿಯ ವಿಷಯದಲ್ಲಿ ಯಾರ ಮುಲಾಜಿಗೂ ಒಳಗಾಗುತ್ತಿಲ್ಲ. ಹಾಗಾಗಿ ಅವರೆಂದರೆ ರಾಜಕಾರಣಿಗಳು, ಅಧಿಕಾರಿಗಳು ಹೆದರುತ್ತಿದ್ದರು. ಅವರು ಅನೇಕರನ್ನು ಬೆಳೆಸಿದ್ದಾರೆ. ಅವರಿಂದ ಮದನ ಮೋಹನ ಆದರ್ಶಗಳು ಮುಂದಿನ ಪೀಳಿಗೆಗೂ ತಲುಪಲಿ ಎಂದು ಆಶಿಸಿದರು.ಅಕಬ್ರಾ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಎ.ಸಿ.ಗೋಪಾಲ ಅವರು, ಮದನ ಮೋಹನ ಅವರಿಗೆ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರಿತ್ತು. ನಾಡಿಗೇ ಮಾರ್ಗದರ್ಶನ ಮಾಡಿದ ಧೀಮಂತರು. ಸೇವಾ ನಿವೃತ್ತಿಯ ಬಳಿಕ ಅಧ್ಯಾತ್ಮ ಜೀವಿಯಾಗಿದ್ದರು. ನಮ್ಮನ್ನೆಲ್ಲ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಮದನ ಮೋಹನ ಉತ್ತರ ಕರ್ನಾಟಕದ ಪತ್ರಿಕೋದ್ಯಮಕ್ಕೆ ಒಂದು ಶಿಸ್ತು ತಂದುಕೊಟ್ಟರು. ಪಕ್ಕಾ ವೃತ್ರಿಪರ ಪತ್ರಕರ್ತರಾಗಿದ್ದ ಅವರು, ಪ್ರಾದೇಶಿಕ ಅಸಮಾನತೆಯನ್ನು ತಮ್ಮ ಲೇಖನಿಯ ಮೂಲಕ ಎತ್ತಿ ತೋರಿಸಿ, ಸರ್ಕಾರದ ಕಣ್ಣು ತೆರೆಸಿ, ಅಸಮಾನತೆ ನಿವಾರಣೆಗೆ ಆಯೋಗ ರಚನೆಯಾಗಲು ಕಾರಣರಾದರು. ಗೋಕಾಕ ಚಳವಳಿ, ಹೈಕೋರ್ಟ ಪೀಠ, ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳು, ಗ್ರಾಮೀಣ ಅಭಿವೃದ್ಧಿಗಾಗಿ ಸದಾ ತಮ್ಮ ದನಿ ಎತ್ತುತ್ತ ಬಂದ ಮಾದರಿ ಪತ್ರಕರ್ತರು ಎಂದು ಸ್ಮರಿಸಿದರು.ಮುರಳಿ ಕರ್ಜಗಿ, ದೀರೇಂದ್ರ ಬಾಗಲಕೋಟ, ಸಂದೀಪ ಹಂದಿಗುಂದ ಅವರು ದಿವಂಗತರಾದ ಕೃಷ್ಣಾಚಾರ ನಾಗನೂರ, ಅಶೋಕ ಪಾಳಂದೆ ಅವರ ಸೇವೆ, ಕಳಕಳಿ ಸ್ಮರಿಸಿದರು. ಜನಮೇಜಯ ಉಮರ್ಜಿ ಕಾರ್ಯಕ್ರಮ ನಿರೂಪಿಸಿದರು.
ಬಿಂದುಮಾಧವ ಪುರೋಹಿತ, ರಾಘವೇಂದ್ರ ಗುಡಿ, ವಾಸು ಕಟ್ಟಿ, ವಾದಿರಾಜ ದೇಸಾಯಿ, ಸುನೀಲ ಗುಮಾಸ್ತೆ, ನರಸಿಂಹ ಕೊತವಾಲ, ಸಂಜಯ ಅರ್ಚಕ, ರಾಘವೇಂದ್ರ ಗೊಗ್ಗಿ, ಗೋಪಾಲಕೃಷ್ನ ಹೆಗಡೆ, ಮನೋಹರ ಪರ್ವತಿ ಮತ್ತಿತರರು ಇದ್ದರು.