ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ದೊಡ್ಡ ಕಲ್ಲುಕಟ್ಟೆಯ ಶ್ರೀ ಗವಿ ಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ದೇವರು, ಗ್ರಾಮದ ಸುತ್ತಮುತ್ತಲಿನ ವಿವಿಧ ದೇವರುಗಳ ಮೆರವಣಿಗೆ ಮೂಲಕ ದಸರಾ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

- ಪಲ್ಲಕ್ಕಿಗಳ ಹೊತ್ತು ಮುಮ್ಮುಖ, ಹಿಮ್ಮುಖವಾಗಿ ಬೆಟ್ಟವೇರುವ ವಿಶೇಷ ಆಚರಣೆ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಮಾದನಬಾವಿ ಗ್ರಾಮದ ದೊಡ್ಡ ಕಲ್ಲುಕಟ್ಟೆಯ ಶ್ರೀ ಗವಿ ಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ದೇವರು, ಗ್ರಾಮದ ಸುತ್ತಮುತ್ತಲಿನ ವಿವಿಧ ದೇವರುಗಳ ಮೆರವಣಿಗೆ ಮೂಲಕ ದಸರಾ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

18 ಹಳ್ಳಿ ಕಟ್ಟೆಮನೆ ಕ್ಷೇತ್ರದ ದೊಡ್ಡ ಕಲ್ಲುಕಟ್ಟೆಯ ಶ್ರೀ ಗವಿ ಸಿದ್ದೇಶ್ವರಸ್ವಾಮಿಗೆ ಶನಿವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅರ್ಚಕರು ಪೂಜೆ ಸಲ್ಲಿಸಿದರು. ಆ ಮೂಲಕ ಪ್ರಾರಂಭವಾದ ದಸರಾ ಬನ್ನಿ ಉತ್ಸವ ದೊಡ್ಡ ಕಲ್ಲುಕಟ್ಟೆಯ ಬೆಟ್ಟದ ಮೇಲೆ ವಿವಿಧ ದೇವರುಗಳನ್ನು ಹೊತ್ತು ತೆರಳಲಾಯಿತು.

ಹಿಮ್ಮುಖ ಬೆಟ್ಟವೇರುವ ಪದ್ಧತಿ:

ವಿಶೇಷವೆಂದರೆ, ಅಲಂಕೃತ ಪಲ್ಲಕ್ಕಿಯಲ್ಲಿ ಬೆನಕನಹಳ್ಳಿ, ಹರಳಹಳ್ಳಿ, ಮಾದನಬಾವಿ ಗ್ರಾಮಗಳ ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ಮರುಡ ಬಸವೇಶ್ವರ ಸ್ವಾಮಿ ದೇವರುಗಳನ್ನು ಭಕ್ತರು ಹೊತ್ತು ದೊಡ್ಡು ಕಲ್ಲುಕಟ್ಟೆಯ ಬೆಟ್ಟವನ್ನು ಮುಮ್ಮುಖವಾಗಿ ಏರಿದರು. ಆದರೆ, ಅಣಜಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು ಹಿಮ್ಮುಖವಾಗಿ ಬೆಟ್ಟವನ್ನು ಏರುವುದು ಇಲ್ಲಿನ ವಿಶೇಷ ಧಾರ್ಮಿಕ ಪದ್ಧತಿಯಾಗಿದೆ.

ಗ್ರಾಮದ ವೀರಭದ್ರೇಶ್ವರ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಗವಿಸಿದ್ದೇಶ್ವರ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಬೆನಕನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ, ಅರಬಗಟ್ಟೆಯ ಚಿಕ್ಕಪ್ಪ ದೇವರು (ಎರೆಹೊಲದ ಒಡೆಯ), ಶ್ರೀ ಮುರುಡ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿಗಳಲ್ಲಿ ಪ್ರತಿಷ್ಠಾಪಿಸಿದ ಮಾದನಬಾವಿ ಗ್ರಾಮದಸ್ಥರು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಉತ್ಸವದಲ್ಲಿ ಡೊಳ್ಳು, ಭಜನೆ, ಕಹಳೆ ಇನ್ನಿತರೆ ವಾದ್ಯಗಳು ಮೆರುಗು ತಂದವು. ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಬೆಳಗ್ಗೆ 5 ಗಂಟೆಗೆ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ದೇವರ ಗಣಮಗ ಅಂಬು ಹೊಡೆಯುವ ಮೂಲಕ ಬನ್ನಿಯನ್ನು ಮುಡಿಯಲಾಯಿತು.

ದೊಡ್ಡ ಕಲ್ಲುಕಟ್ಟೆಯ ಬನ್ನಿ ಉತ್ಸವ ಹಾಗೂ ವಿವಿಧ ದೇವರುಗಳ ಮೆರವಣಿಗೆಯಲ್ಲಿ ಡೊಳ್ಳು, ತಮಟೆ, ಭಜನೆ, ಸಾಂಸ್ಕೃತಿಕ ಜಾನಪದ ಹಾಡುಗಳು ಉತ್ಸವಕ್ಕೆ ಮೆರಗು ನೀಡಿದವು. ಉತ್ಸವದಲ್ಲಿ ದಾವಣಗೆರೆ, ಶಿವಮೊಗ್ಗ ಸುತ್ತಮುತ್ತಲಿನ ಜಿಲ್ಲೆಯಿಂದ ಸಾವಿರಾರು ಭಕ್ತರು ಆಗಮಿಸಿ ಬನ್ನಿ ಮುಡಿದು ಪರಿಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.

- - -

-ಫೋಟೋ:

ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಶನಿವಾರ ದೊಡ್ಡ ಕಲ್ಲುಕಟ್ಟೆಯ ವಿವಿಧ ದೇವರುಗಳ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನಡೆಯಿತು.