ಸಾರಾಂಶ
ಗ್ರಾಮಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಆಗಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ಮುಂದೂಡಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಾದಾಪುರ ಗ್ರೇಡ್ 1 ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಕಳೆದ ಎರಡು ವರ್ಷಗಳಿಂದ ನಡೆಯದಿದ್ದು ಮಂಗಳವಾರ ಕರೆದ ಗ್ರಾಮಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಆಗಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಸಭೆಯನ್ನು ಮುಂದೂಡಲಾಯಿತು.ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಾಲಿಸೋಮಣ್ಣ ಅಧ್ಯಕ್ಷತೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗಮಿಸಿದರು. ಗ್ರಾಮಸ್ಥರಾದ ಕೊಪ್ಪತ್ತಂಡ ಗಣೇಶ, ಮಾಜಿ ಸದಸ್ಯ ಮಜೀದ್, ಮಠದ ಗಣೇಶ್, ಮಾಜಿ ಸದಸ್ಯ ಎಚ್.ಕೆ.ಸೋಮಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಗ್ರಾಮಸಭೆಗೆ ಹಾಜರಾಗುವಂತೆ 32 ಇಲಾಖೆಗಳಿಗೆ ನೋಟಿಸ್ ಕಳುಹಿಸಲಾಗಿದ್ದು ಆದರೆ ಪ್ರಮುಖ ಇಲಾಖೆ ಬಾರದಿರುವುದರಿಂದ 15 ದಿನದಲ್ಲಿ ಗ್ರಾಮಸಭೆಯನ್ನು ನಡೆಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿ ರಸ್ತೆ ತಡೆ ನಡೆಸುವುದಾಗಿ ಸಭೆ ಸೂಚಿಸಿದಾಗ ಸಭೆಗೆ ಆಗಮಿಸಿದ್ದ ಸರ್ವ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.ಏತನ್ಮಧ್ಯೆ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ಸರಬರಾಜು ಗೊಳ್ಳುತ್ತಿರುವ ನಲ್ಲಿ ನೀರಿನಲ್ಲಿ ಕಲುಷಿತ ನೀರು ಸರಬರಾಜುಗೊಳ್ಳುತ್ತಿದ್ದು ನೀರನ್ನು ಬಾಟಲಿಯಲ್ಲಿ ತಂದು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನೀಫ್ ಪ್ರದರ್ಶಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷ ಸುರೇಶ್ ಬಾವೆ ಪಿಡಿಒ ಗುಳ್ಳಪ್ಪ ಕೂತಿನರ್, ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ದಮಯಂತಿ, ಶೀಲಾ, ಜ್ಯೋತಿ, ಗಿರೀಶ, ಗೋಪಿ, ನಿರೂಪ, ಮನು ಬಿದ್ದಪ್ಪ, ಮಾನಸ ಹಾಗೂ ಭಾಗೀರಥಿ ಇದ್ದರು.