ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಅಲ್ಲಮಪ್ರಭು ಸಭಾಂಗಣದಲ್ಲಿ ಡಿ.4ರಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಅವರ 956ನೇ ಜಯಂತ್ಯುತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಬಳ್ಳಿಗಾವಿ ಸೇವಾ ಸಮಿತಿ ಅಧ್ಯಕ್ಷ ಟಿ.ಸುರೇಶ್ ಅರಳೇಹಳ್ಳಿ ಹೇಳಿದರು.

- ಗ್ರಾಪಂ ಸಭಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ: ಸಮಿತಿ ಅಧ್ಯಕ್ಷ ಸುರೇಶ್‌ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಬಳ್ಳಿಗಾವಿಯ ಅಲ್ಲಮಪ್ರಭು ಸಭಾಂಗಣದಲ್ಲಿ ಡಿ.4ರಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಅವರ 956ನೇ ಜಯಂತ್ಯುತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಬಳ್ಳಿಗಾವಿ ಸೇವಾ ಸಮಿತಿ ಅಧ್ಯಕ್ಷ ಟಿ.ಸುರೇಶ್ ಅರಳೇಹಳ್ಳಿ ಹೇಳಿದರು.

ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಹಲವು ಶಿವಶರಣರಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿದೆ. ಅಕ್ಕ ಮಹಾದೇವಿ, ಅಲ್ಲಮಪ್ರಭು ಸಹಿತ ಮಾದಾರ ಚನ್ನಯ್ಯನವರು ತಾಲೂಕಿನಲ್ಲಿ ಜನಿಸಿದ್ದಾರೆ. ಈ ಬಗ್ಗೆ ನಿರಂತರ ಆಗಿರುವ ಹಲವು ಸಂಶೋಧನೆಯಿಂದ ತಾಲೂಕಿನ ಬಳ್ಳಿಗಾವಿ ಮಾದಾರ ಚನ್ನಯ್ಯನವರ ಜನ್ಮಸ್ಥಳ ಎಂಬುದು ತಾಲೂಕಿನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಶ್ರೇಷ್ಠ ಶಿವಶರಣ ಮಾದಾರ ಚನ್ನಯ್ಯ ಜಯಂತಿಯನ್ನು ಬಳ್ಳಿಗಾವಿಯಲ್ಲಿ ಅತ್ಯಂತ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ದಿಸೆಯಲ್ಲಿ 4ರಂದು ಗುರುವಾರ ಬಳ್ಳಿಗಾವಿಯ ಗ್ರಾ.ಪಂ. ಕಾರ್ಯಾಲಯದಲ್ಲಿನ ಅಲ್ಲಮಪ್ರಭು ಸಭಾಂಗಣದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯರವರ 956ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಾತಂಗ (ಆದಿ ಜಾಂಬವ) ಸಮಾಜ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಬಳ್ಳಿಗಾವಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯ ಸಾಹಿತಿ, ಮಹಾಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಸಂಶೋಧಕ ಮ.ಸಿ. ನಾರಾಯಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಗಣ್ಯರಾದ ಗುರುಮೂರ್ತಿ, ನಾಗರಾಜ ಗೌಡ, ಶ್ರೀನಿವಾಸ ಕರಿಯಣ್ಣ, ಗೋಣಿ ಮಾಲತೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಸರ್ಕಾರಿ ಪ್ರ.ದ. ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಶಿವಶರಣ ಮಾದಾರ ಚನ್ನಯ್ಯ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಬಿಎಸ್‌ಎನ್‌ಎಲ್ ನಿವೃತ್ತ ಎಂಜಿನಿಯರ್ ಶಿವಪ್ಪ ಮಾತನಾಡಿ, ನಿರಂತರ ಸಂಶೋಧನೆ ಮೂಲಕ ತಾಲೂಕಿನ ಬಳ್ಳಿಗಾವಿ ಶಿವಶರಣ ಮಾದಾರ ಚನ್ನಯ್ಯರವರ ಜನ್ಮಸ್ಥಳ ಎಂಬ ಸಂಗತಿ ತಾಲೂಕಿನ ಧಾರ್ಮಿಕ,ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.ಈ ದಿಸೆಯಲ್ಲಿ ಜಯಂತೋತ್ಸವ ಹೆಚ್ಚು ಅರ್ಥಪೂರ್ಣವಾಗಿಸಲು ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ತಾಲೂಕು ಆದಿಜಾಂಬವ ಮಹಿಳಾ ಸಮಾಜ ಅಧ್ಯಕ್ಷೆ ಕೇಣುಕಮ್ಮ ಪರಸಪ್ಪ ಚಿಕ್ಕಾಪುರ, ನಿವೃತ್ತ ಶಿಕ್ಷಕ ಕೆ.ಚಂದ್ರಪ್ಪ, ಸಮಿತಿ ನಿರ್ದೇಶಕ ಮುಖೇಶ್ ಮತ್ತಿಕೋಟೆ, ದಿನೇಶ್ ಮುಗುಳಗೆರೆ, ರಾಮಪ್ಪ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

- - -

-2ಕೆಎಸ್.ಕೆಪಿ2: ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಅರಳೇಹಳ್ಳಿ ಮಾತನಾಡಿದರು.