ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ, ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಉಡುಪಿ: ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ, ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಶನಿವಾರ ಶ್ರೀ ಕ್ಷೇತ್ರದ ಕಚೇರಿಯಲ್ಲಿ ನೆರವೇರಿತು.
ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿಯೂ ಗುರುಗಳ ಪುತ್ಥಳಿಯನ್ನು ನಿರ್ಮಿಸಬೇಕೆಂಬ ವಿಚಾರ ಪ್ರಸ್ತಾಪವಾಗಿತ್ತು. ಆದ್ದರಿಂದ ಸಮಾಜದ ಪ್ರತಿಯೊಂದು ಮನೆಯಿಂದಲೂ ಶಕ್ತ್ಯಾನುಸಾರ ಗುರು ಕಾಣಿಕೆ ರೂಪದಲ್ಲಿ ವಂತಿಗೆಯನ್ನು ಸಲ್ಲಿಸಿ, ಮೊಗವೀರ ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ರಶೀದಿ ಪುಸ್ತಕ ಬಿಡುಗಡೆಗೊಳಿಸಿದ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರು, 3 ಕೋಟಿ ರು. ವೆಚ್ಚದ ಈ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಸಮಾಜದ ಸರ್ವ ಬಂಧುಗಳು ಒಗ್ಗಟ್ಟಿನಿಂದ ಶ್ರಮವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಮೊಗವೀರ ಸಮಾಜದ ಪ್ರಮುಖರಾದ ಗಿರಿಧರ್ ಸುವರ್ಣ, ಮೋಹನ್ ಬೆಂಗ್ರೆ, ಮನೋಜ್ ಉಳ್ಳಾಲ, ಪದ್ಮಾಕರ್ ಮಸ್ಕತ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ರಾಜೇಶ್ ಉಳ್ಳಾಲ, ಪವನ್ ಆನಂದ್ ಎರ್ಮಾಳ್, ಕವಿತಾ ಶರತ್, ವಾಸುದೇವ ಸಾಲ್ಯಾನ್, ದಿನೇಶ್ ಎರ್ಮಾಳ್, ಶಿವರಾಮ್ ಕೋಟ, ಸುಗುಣ ಕರ್ಕೇರ, ಸದಾನಂದ ಬಂಗೇರ ಉಳ್ಳಾಲ, ಎಂ.ಎಸ್. ಸಂಜೀವ ಕೋಟ, ಅಶೋಕ್ ಉಪ್ಪಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.