ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಉಚ್ಚಿಲ ಮೊಗವೀರ ಭವನದಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು.

ಉಚ್ಚಿಲ: ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಉಚ್ಚಿಲ ಮೊಗವೀರ ಭವನದಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ನೂತನ ಪುತ್ಥಳಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು.ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಪ್ರಸ್ತುತ ಉಚ್ಚಿಲ ದಸರಾಗೆ ಸರ್ಕಾರದಿಂದ ಪ್ರತಿವರ್ಷ 50 ಲಕ್ಷ ರು. ಅನುದಾನ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉಚ್ಚಿಲ ಕ್ಷೇತ್ರದ ಅಭಿವೃದ್ಧಿಗೆ ಬಾಕಿ ಇರುವ ಸರ್ಕಾರದ ಅನುದಾನ ಕೂಡಲೇ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುವುದು. ಇಲಾಖೆಯ ವತಿಯಿಂದ ಜಿಲ್ಲೆಯ 92 ಸಂಸ್ಥೆಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು. ಕರಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಸಿ, ಮುಖ್ಯಮಂತ್ರಿ ಅವರು ತುಳು ಭಾಷೆಗೆ ರಾಜ್ಯದ 2 ನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿದ್ದಾರೆ. ತುಳು ಭಾಷಿಗರು ಪ್ರೀತಿಯಿಂದ ಮಾತನಾಡುವವರು, ಈ ಭಾಷೆಗೆ ಈ ಮಾನ್ಯತೆ ದೊರತಿರುವುದು ಸಾರ್ಥಕವಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕೂಡ ಹಣ ಮೀಸಲಿರಿಸಲಾಗಿದ್ದು ಈ ಭಾಗದ ಅಭಿವೃದ್ಧಿಯ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಕ್ಷೇತ್ರದಲ್ಲಿ ಪ್ರತಿವರ್ಷ ಅಭೂತಪೂರ್ವವಾಗಿ ದಸರಾ ನಡೆಸಲಾಗುತ್ತಿದೆ. ಆದರೇ ಕ್ಷೇತ್ರಕ್ಕೆ ಸರ್ಕಾರದಿಂದ ಬರಬೇಕಾದ ಅನುದಾನ ಬಾಕಿ ಇದ್ದು, ಅದನ್ನು ಶೀಘ್ರ ಬಿಡುಗಡೆ ಮಾಡುವಂತೆ ಹಾಗೂ ಉಚ್ಚಿಲ ದಸರಾಕ್ಕೆ ಸರ್ಕಾರ ಪ್ರತಿ ವರ್ಷ 2 ಕೋಟಿ ರು. ಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಸಮುದಾಯದ ಗುರಿಕಾರ ಬಂಧುಗಳಿಗೆ ಧನಸಹಾಯ ವಿತರಣೆ ಮಾಡಲಾಯಿತು. ಉಚ್ಚಿಲ ದಸರಾದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಪೋಸ್ಟರ್ ಅನಾವರಣ ಮಾಡಲಾಯಿತು. ಸಚಿವರನ್ನು ಸನ್ಮಾನಿಸಲಾಯಿತು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಸಮುದಾಯದ ಮುಖಂಡರಾದ ಆನಂದ್ ಸಿ ಕುಂದರ್, ಅಜಿತ್ ಸುವರ್ಣ, ಸಂತೋಷ್ ಪುತ್ರನ್, ಉದಯ್ ಕುಮಾರ್ ಹಟ್ಟಿಯಂಗಡಿ, ವೇದಪ್ರಕಾಶ್ ಶ್ರಿಯಾನ್, ಕವಿತಾ ಶರತ್, ನಾಗರಾಜ್ ಸುವರ್ಣ ಮನೋಜ್ ಸಾಲ್ಯಾನ್ ಉಳ್ಳಾಲ ಮತ್ತಿತರರಿದ್ದರು.

ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ನಿರೂಪಿಸಿದರು. ಮನೋಜ್ ಸಾಲ್ಯಾನ್ ವಂದಿಸಿದರು.ನಾಡೋಜ ಡಾ. ಜಿ. ಶಂಕರ್ ಅವರು, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ 31 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಕೋಟಿ ರೂ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ ಎಂದರು.