ಹಂಪಿ ಪರಿಸರದಲ್ಲಿ ಮತ್ತೆ ನೆನೆಪಾದ ಮಡ್ಡಿ ನಾಗೇಂದ್ರ!

| Published : Mar 12 2025, 12:47 AM IST

ಸಾರಾಂಶ

ಮಡ್ಡಿ ನಾಗೇಂದ್ರ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದ. ಹೀಗಾಗಿ ಹಂಪಿ ಮತ್ತು ಆನೆಗೊದಿ ಭಾಗದಲ್ಲಿ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಈತ ಒಮ್ಮೆ ವಿದೇಶಿಗರ ಮೇಲೆ ದಾಳಿ ಮಾಡಿ, ಹಣ ಕಿತ್ತುಕೊಂಡು ಪರಾರಿಯಾದರೆ ತಿಂಗಾಳುನುಗಟ್ಟಲೇ ಸುಳಿವೇ ಇರುತ್ತಿರಲಿಲ್ಲ. ಪೊಲೀಸರು ಮೈಮರೆಯುತ್ತಿದ್ದಂತೆ ಮತ್ತೆ ದಾಳಿ ಮಾಡುತ್ತಿದ್ದ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ವಿದೇಶಿಯರ ಸ್ವರ್ಗ ಎಂದೇ ಖ್ಯಾತಿಯಾಗಿರುವ ಹಂಪಿ-ಆನೆಗೊಂದಿ ಬಳಿಯ ವಿರೂಪಾರುಪರ ಗಡ್ಡೆ. ಸಾಣಾಪುರ ಕೆರೆಯ ಸುತ್ತಮುತ್ತಲು ಪ್ರದೇಶದಲ್ಲಿ ಈಗ ಮರಿವೀರಪ್ಪನ್ ಎಂದೇ ಖ್ಯಾತನಾಗಿದ್ದ ಮಡ್ಡಿ ನಾಗೇಂದ್ರ ನೆನಪು ಮುನ್ನಲೆಗೆ ಬಂದಿದೆ.

ಆನೆಗೊಂದಿಯ ಸಾಣಾಪುರ ಬಳಿ ರಂಗಾಪುರ ಪ್ರದೇಶದ ಗಂಗಮ್ಮನಗುಡಿ ಬಳಿ ವಿದೇಶಿ ಮಹಿಳೆ ಮೇಲೆ ನಡೆದ ಗ್ಯಾಂಗ್ ರೇಪ್‌ ಪ್ರಕರಣದಿಂದಾಗಿ ಕೆಲವರು ಆ ಪ್ರದೇಶದ ಹಳೆಯ ಅಪರಾಧ ಪ್ರಕರಣಗಳನ್ನು ತಡಕಾಡಲು ಶುರು ಮಾಡಿದ್ದು, ಮಡ್ಡಿ ನಾಗೇಂದ್ರನ ಅಟ್ಟಹಾಸ ನೆನಪಾಗಿದೆ.

ಸುಮಾರು 20 ವರ್ಷ ನೆಮ್ಮದಿಯಿಂದ ಇದ್ದ ಆನೆಗೊಂದಿ, ಹಂಪಿ ಸುತ್ತಮುತ್ತಲ ಪ್ರದೇಶದಲ್ಲಿ ಇದೀಗ ನಡೆದ ವಿದೇಶಿ ಮಹಿಳೆ ಅತ್ಯಾಚಾರ ಪ್ರಕರಣ ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿದೆ.

ಯಾರೀ ಮಡ್ಡಿ ನಾಗೇಂದ್ರ:

ಈ ಮಡ್ಡಿ ನಾಗೇಂದ್ರ ಆನೆಗೊಂದಿಯವನು. ಹೀಗೆ, ಯಾವಾಗಲೋ ಒಂದು ಬಾರಿ ವಿದೇಶಿಯರ ಬಳಿ ಹಣಕ್ಕಾಗಿ ಪೀಡಿಸಿ, ಅವರು ಕೊಡದಿದ್ದಾಗ ಅವರ ಬಳಿ ಕಿತ್ತುಕೊಳ್ಳುತ್ತಿದ್ದ. ಇದಾದ ಮೇಲೆ ಅದನ್ನೇ ಕಾಯಕ ಮಾಡಿಕೊಂಡಿದ್ದ. ಇದೆಲ್ಲವೂ ನಡೆದಿದ್ದು 1992ರ ಆಸುಪಾಸುನಲ್ಲಿ. ಇದಾದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿ ಬಂಧನವಾಗುತ್ತದೆ. ಬೇಲ್ ಪಡೆದ ಮೇಲೆಯೂ ಆತ ತನ್ನ ಹಳೆಯ ಚಾಳಿ ಮುಂದುವರಿಸುತ್ತಾನೆ. ಮೊದ ಮೊದಲು ವಿದೇಶಿಗರ ಬಳಿ ಹಣ ಕಿತ್ತು ಜೀವಿಸುತ್ತಿದ್ದ, ನಂತರ ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದನ್ನು ಶುರು ಮಾಡಿದ. ಪ್ರತಿರೋಧಿಸಿದಾಗ ಒಂದೆರೆಡು ಕೊಲೆ ಸಹ ಮಾಡಿದ. ಸ್ಥಳೀಯರು ಇತನ ಸುಳಿವು ನೀಡುತ್ತಿರಲಿಲ್ಲ.

ಬೆಟ್ಟದಲ್ಲಿಯೇ ಅಡಗಿಕೊಂಡು ಜೀವನ ಮಾಡುತ್ತಿದ್ದ ಈತನನ್ನು ಮರಿ ವೀರಪ್ಪನ್ ಎಂದು ಕರೆಯುತ್ತಿದ್ದರು.

ಪೊಲೀಸ್ ಸರ್ಪಗಾವಲು:

ಮಡ್ಡಿ ನಾಗೇಂದ್ರ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದ. ಹೀಗಾಗಿ ಹಂಪಿ ಮತ್ತು ಆನೆಗೊದಿ ಭಾಗದಲ್ಲಿ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಈತ ಒಮ್ಮೆ ವಿದೇಶಿಗರ ಮೇಲೆ ದಾಳಿ ಮಾಡಿ, ಹಣ ಕಿತ್ತುಕೊಂಡು ಪರಾರಿಯಾದರೆ ತಿಂಗಾಳುನುಗಟ್ಟಲೇ ಸುಳಿವೇ ಇರುತ್ತಿರಲಿಲ್ಲ. ಪೊಲೀಸರು ಮೈಮರೆಯುತ್ತಿದ್ದಂತೆ ಮತ್ತೆ ದಾಳಿ ಮಾಡುತ್ತಿದ್ದ. ವಿಶೇಷ ಪಡೆ ಈತನಿಗಾಗಿ ಹುಡುಕಾಟ ನಡೆಸದ ಜಾಗಗಳೇ ಇಲ್ಲ. ಅದರಲ್ಲೂ ಆನೆಗೊಂದಿಯಿಂದ ಹಂಪಿಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಈತನ ಉಪಟಳ ಇರುತ್ತಿದ್ದವು. ಮಡ್ಡಿ ನಾಗೇಂದ್ರನ ಬಗ್ಗೆ ವಿದೇಶಿ ಪತ್ರಿಕೆಗಳಲ್ಲೂ ವರದಿ ಬಂದವು. ಹಂಪಿ, ಸುತ್ತಮುತ್ತಲು ಪ್ರದೇಶದಲ್ಲಿ ಬರುವವರು ಈತನ ಫೋಟೋ ಹಿಡಿದುಕೊಂಡು ಬರುತ್ತಿದ್ದರು. ಗುಡ್ಡದಿಂದ ಗುಡ್ಡಕ್ಕೆ ಜಿಗಿಯುವ, ಮರದಿಂದ ಮರಕ್ಕೆ ಕೋತಿಯಂತೆ ಜಿಗಿಯುವ ಸಾಹಸಿಯೂ ಆಗಿದ್ದ. ಹೀಗಾಗಿ, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ದಾಳಿ ಬಳಿಕ ಮಾರುವೇಷ ಹಾಕಿ, ಜೀವನ ಮಾಡುತ್ತಿದ್ದ. ಕೊನೆಗೆ ಯಲಬುರ್ಗಾ ಬಳಿ ಹಳ್ಳಿಯೊಂದರಲ್ಲಿ ಪೊಲೀಸರ ಕೈಗೆ ಸಿಕ್ಕ ಮತ್ತು ತಪ್ಪಿಸಿಕೊಂಡು ಹೋಗಲು ಹೋಗಿ ಗುಂಡೇಟು ತಿಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ 2004ರಲ್ಲಿ ಸಾವನ್ನಪ್ಪಿದ.

ಗಾಂಜಾ, ಚರಸ್‌ ಮಾರಾಟ:

ಮೊದಮೊದಲು ಸ್ಥಳೀಯರು ಇವರಿಗೆ ಗಾಂಜಾ, ಚರಸ್‌ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳತನದಿಂದ ಮಾರಾಟ ಮಾಡುತ್ತಿದ್ದರು. ಉತ್ತರಪ್ರದೇಶದ ಕೆಲವರು ಸಾಧುವೇಷ ಧರಿಸಿಯೂ ಈ ದಂಧೆ ಮಾಡುತ್ತಿದ್ದರು. ಈಗ ವಿದೇಶಿಗರಲ್ಲಿ ಕೆಲವರು ಈ ದಂಧೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಪದೇಪದೇ ಇಲ್ಲಿಗೆ ಬಂದು, ಗಾಂಜಾ, ಚರಸ್ ದೊರೆಯುವ ಮೂಲ ಕಂಡುಕೊಂಡು, ತಾವೇ ಈ ದಂಧೆಯಲ್ಲಿ ತೊಡಗುತ್ತಿದ್ದಾರೆ. ಹೀಗಾಗಿ ವಿದೇಶಿಗರ ನಶೆಯ ನಿಶೆ ಪತ್ತೆಯಾಗದಂತೆ ಆಗಿದೆ. ಈಗ ಪೊಲೀಸರು ಇವರ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದು, ಚೆಕ್‌ಪೋಸ್ಟ್ ಹಾಕಿದ್ದಾರೆ. ಇಲ್ಲಿ ತಂಗಿರುವ ವಿದೇಶಿಗರು ಎಷ್ಟು ದಿನಗಳಿಂದ ಇಲ್ಲಿದ್ದಾರೆ, ಎಷ್ಟು ಬಾರಿ ಬಂದಿದ್ದಾರೆ. ಯಾವ ದೇಶದಿಂದ ಬಂದಿದ್ದಾರೆ ಎನ್ನುವ ಮೂಲವನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ.