ಕಳೆದ ಹಲವು ದಿನಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಸಮರ್ಪಕ ನೀರು ಹಾಯಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಬೆಳೆಗಳು ಒಣಗುತ್ತಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿರುವುದನ್ನು ಖಂಡಿಸಿ ತಾಲೂಕಿನ ಹೂತಗೆರೆ ಮತ್ತು ಕುರುಬರದೊಡ್ಡಿ ಗ್ರಾಮಗಳ ರೈತರು, ಗ್ರಾಮಸ್ಥರು ವಿದ್ಯುತ್ ಇಲಾಖೆ ವಿರುದ್ಧ ಕೆಸ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.ಕೆಸ್ತೂರಿನ ಚೆಸ್ಕಾಂ ಶಾಖಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿದ್ಯುತ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ನಿ) ಶಾಖಾಧಿಕಾರಿ ಸುಧಾಮಣಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಹಲವು ದಿನಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಸಮರ್ಪಕ ನೀರು ಹಾಯಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಬೆಳೆಗಳು ಒಣಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ನಿಯಮಿತ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಭಾಗದ ಹಳ್ಳಿಗಳಲ್ಲಿ ಚಿರತೆ ಹಾಗೂ ಇತರೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಳವಾಗಿದ್ದು ರಾತ್ರಿಯ ವೇಳೆ ರೈತರು ತಮ್ಮ ಜಮೀನುಗಳಿಗೆ ತೆರಳಿ ನೀರು ಹಾಯಿಸಲು ಭಯ ಪಡುವ ವಾತವರಣ ಸೃಷ್ಟಿಯಾಗಿದೆ, ಆದ ಕಾರಣ ರಾತ್ರಿ ವೇಳೆ ಬದಲು ಹಗಲಿನಲ್ಲೆ ನಿರಂತರವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಲೈನ್ ಮೇನ್ ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಅವರುಗಳ ಮೇಲೆ ಶಿಸ್ತುಕ್ರಮ ಕೖಗೊಳ್ಳುವಂತೆ ಒತ್ತಾಯಿಸಿದರು.

ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಹೂತಗೆರೆ ಹಾಗೂ ಕುರಬರದೊಡ್ಡಿ ಗ್ರಾಮಗಳ ರೈತರಾದ ಎಚ್.ಎ.ಶಂಕರ್, ಪ್ರದೀಪ್, ಹರೀಶ್, ರಾಜಣ್ಣ, ರವೀಶ, ಜನಾರ್ಧನ, ಮಧು, ನಿಂಗಯ್ಯ, ಅಭಿನಂದನ್, ವರುಣಾ, ಚಿಟ್ಟಪ್ಪ ಗುರುಮೂರ್ತಿ, ವಿಜಯ್, ಸಂಜಯ್, ರವಿ,ರಾಮಣ್ಣ, ಕೆಂಚಪ್ಪರ ರವಿ, ನಂದೀಶ ಕೆ,ಸಿ, ಹರೀಶ್, ಕುಮಾರ, ನಿರಂಜನ ಕೆ ಪಿ,ಶಿವಲಿಂಗಯ್ಯ, ಅಭಿಲಾಷ್, ರಮೇಶ್ ಇತರರು ಭಾಗವಹಿಸಿದರು.