ಸಾರಾಂಶ
ಮದ್ದೂರು: ಐತಿಹಾಸಿಕ ಮದ್ದೂರು ಕೆರೆಯನ್ನು 5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಜೊತೆಗೆ ಪ್ರವಾಸಿ ತಾಣವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಆಶ್ವಾಸನೆ ನೀಡಿದರು.
ಮದ್ದೂರು: ಐತಿಹಾಸಿಕ ಮದ್ದೂರು ಕೆರೆಯನ್ನು 5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಜೊತೆಗೆ ಪ್ರವಾಸಿ ತಾಣವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಆಶ್ವಾಸನೆ ನೀಡಿದರು.
ದೇಶಹಳ್ಳಿ ಸಮೀಪದ ಮದ್ದೂರು ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗೀನ ಸಮರ್ಪಣೆ ಮಾಡಿ ಮಾತನಾಡಿ, ಕ್ಷೇತ್ರದಲ್ಲಿ ಮದ್ದೂರು ಕೆರೆ ಹಾಗೂ ಸೂಳೆಕೆರೆ ಬಹುದೊಡ್ಡ ಕೆರೆಗಳಾಗಿವೆ. ರೈತರ ಜೀವನಾಡಿಯಾಗಿರುವ ಈ ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.ಈ ಕರೆಗಳನ್ನು ತಲಾ 5 ಕೋಟಿ ರು. ವೆಚ್ಚದಲ್ಲಿ ಹೂಳು ತೆಗೆದು, ಅಭಿವೃದ್ಧಿಪಡಿಸುವ ಜೊತೆಗೆ ಕೆರೆ ಏರಿ ಕೆಳಗೆ ಇರುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು. ಮದ್ದೂರು ಕೆರೆ ಹೂಳು ತೆಗೆದ ನಂತರ ಕೆರೆ ಏರಿಮೇಲೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.
ಗ್ರಾಮದ ಆದಿಶಕ್ತಿ ಬಳಿಯಿಂದ ಮದ್ದೂರು ಕೆರೆಏರಿ ಪಕ್ಕದಿಂದ ಹಾದು ಹೋಗಿ ಚನ್ನೇಗೌಡನ ದೊಡ್ಡಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿರುವ ಶಾಸಕರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಅಭಿನಂದಿಸಿದರು.ಜಿಪಂ ಮಾಜಿ ಸದಸ್ಯ ಸುರೇಶ್ ಕಂಠಿ, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ವಳಗೆರೆಹಳ್ಳಿ ಶಂಕರೇಗೌಡ, ಪುಟ್ಟರಾಜು, ಸಿದ್ದರಾಮಯ್ಯ, ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜು ಹಾಗೂ ಮುಖಂಡರು ಭಾಗವಹಿಸಿದ್ದರು.