ಕನ್ನಡಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆಗೆ ಸೇರ್ಪಡೆಯಾಗಿರುವುದನ್ನು ಕೈ ಬಿಡಲು ಸರ್ಕಾರ ಮಟ್ಟದಲ್ಲಿ ನಾನು ನಿಮ್ಮ ಪರ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗ್ರಾಪಂ ಆವರಣದಲ್ಲಿ ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆಯಿಂದ ಕೈ ಬಿಡುವಂತೆ ಒತ್ತಾಯಿಸಿ 195 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪ್ರತಿಭಟನಾ ನಿರತ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.

ಈ ಹಿಂದೆ ಪಟ್ಟಣವಾಗಿದ್ದ ಮದ್ದೂರನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದಾಗಿ ನಗರಸಭೆಯನ್ನಾಗಿ ಮೇಲ್ದರ್ಜೇಗೇರಿಸುವ ಸಂಬಂಧ ಸರ್ಕಾರದ ಮಾನದಂಡದ ಅನುಗುಣವಾಗಿ ಜನಸಂಖ್ಯೆ ಆಧಾರದ ಮೇಲೆ ಮದ್ದೂರು ಸಮೀಪದ ಗೆಜ್ಜಲಗೆರೆ, ಸೋಮನಹಳ್ಳಿ, ಗೊರವನಹಳ್ಳಿ ಹಾಗೂ ಚಾಮನಹಳ್ಳಿ 4 ಗಾಪಂಗಳನ್ನು ಸೇರ್ಪಡೆಗೊಳಿಸಲಾಗಿತ್ತು. ನಂತರ ದಿನಗಳಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳೆಲ್ಲ ಮುಗಿದು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿತ್ತು ಎಂದರು.

ಆದರೆ, ಗೆಜ್ಜಲಗೆರೆ ಗ್ರಾಪಂಯನ್ನು ನಗರಸಭಾ ವ್ಯಾಪ್ತಿಯಿದ ಕೈ ಬಿಡಲು ಒತ್ತಾಯಿಸಿ ಗ್ರಾಮಸ್ಥರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದು, ವಿಪಕ್ಷದ ಹಲವು ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದರು. ಅಷ್ಟೆ ಅಲ್ಲದೇ, ನನ್ನನ್ನು ದರೋಡೆಕೋರನಂತೆ ಬಿಂಬಿಸಿ ಮಾತನಾಡುತ್ತಿರುವುದರಿಂದ ನನಗೆ ತುಂಬಾ ಬೇಸರ ತಂದಿತ್ತು ಎಂದರು.


ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡಲು ಬಂದ ನಾನು ನಂತರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದು ಶಾಸಕನಾದೆ. ಮೂರು ವರ್ಷಗಳಲ್ಲಿ ಹಲವು ನೀರಾವರಿ ಯೋಜನೆ ಸೇರಿದಂತೆ ರೈತರಿಗೆ ಅನುಕೂಲವಾಗುವ ಕೆಲಸಗಳು ಸೇರಿದಂತೆ ಜನಪರ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಭಟನಾ ಸ್ಥಳಕೆ ಬಂದಿದ್ದ ವಿಪಕ್ಷದ ನಾಯಕರೆಲ್ಲ ನನ್ನ ಹತ್ತಿರ ಸಹಾಯ ತೆಗೆದುಕೊಂಡಿವವರೇ. ಇದನ್ನು ನಾನು ಎಲ್ಲಿ ಬೇಕಾದರು ಹೇಳುತ್ತೇನೆ. ಅವರೆಲ್ಲ ಬಂದು ನನ್ನ ವಿರುದ್ಧ ಮಾತನಾಡಿದ್ದು ನನಗೆ ತುಂಬಾ ನೋವು ತಂದಿತ್ತು. ಆದ್ದರಿಂದ ಪ್ರತಿಭಟನೆ ಸ್ಥಳಕ್ಕೆ ಬಂದಿರಲಿಲ್ಲ ಎಂದರು.

ಗೆಜ್ಜಲಗೆರೆ ಗ್ರಾಮವಾಗಿಯೇ ಉಳಿದರು ನಿಮ್ಮಷ್ಟೆ ನಾನು ಸಂತೋಷ ಪಡುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಗೆಜ್ಜಲಗೆರೆ ಗ್ರಾಪಂ ನಗರಸಭೆಯಿಂದ ಕೈ ಬಿಡುವ ಬಗ್ಗೆ ಒಂದು ದಿನಾಂಕವನ್ನು ನಿಗಧಿಗೊಳಿಸಿ ಮಾತನಾಡುತ್ತೇನೆ ಎಂದರು.

ಚರ್ಚೆ ವೇಳೆ ಗ್ರಾಮದ ಐದಾರು ಮಂದಿ ಪ್ರಮುಖರು ನನ್ನ ಜತೆ ಬನ್ನಿ, ನಿಮ್ಮ ಬೇಡಿಕೆ ಪರ ನ್ಯಾಯಕೊಡಿಸುವ ಪ್ರಯತ್ನವನ್ನು ಮಾಡುವ ಭರವಸೆಯನ್ನು ನೂರಕ್ಕೆ ಸಾವಿರ ಪಟ್ಟು ಈ ಮೂಲಕ ನೀಡುತ್ತಿದ್ದೇನೆ. ಹೀಗಾಗಿ ಧರಣಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ರೈತ ಪರ ಹೋರಾಟಗಾತಿ ಸುನಂದ ಜಯರಾಮು ಮಾತನಾಡಿ, ಶಾಸಕರಾದ ನಿಮ್ಮ ಮೇಲೆ ನಮಗೆ ಭರವಸೆ ಇದೆ. ಗೆಜ್ಜಲಗೆರೆ ಗ್ರಾಮ ಗ್ರಾಮವನ್ನಾಗಿಯೇ ಉಳಿಸುತ್ತೀರಿ ಎಂಬ ನಂಬಿಕೆಯಿದೆ. ಅಲ್ಲಿಯವರೆಗೆ ಗ್ರಾಮಸ್ಥರಾದ ನಾವು ಗ್ರಾಪಂ ಮುಂದೆ ನಡೆಸುತ್ತಿರುವ ಧರಣಿಯನ್ನು ಶಾಂತಿಯುತವಾಗಿ ಮುಂದುವರೆಸುತ್ತೇವೆ ಎಂದರು.

ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈ ಬಿಡುವಂತೆ ಒತ್ತಾಯಿಸಲಾದ ಮನವಿ ಪತ್ರವನ್ನು ಶಾಸಕರಿಗೆ ಗ್ರಾಮದ ಮುಖಂಡರು ಗ್ರಾಮಸ್ಥರ ಪರವಾಗಿ ನೀಡಿದರು.

ಈ ವೇಳೆ ಮುಖಂಡರಾದ ಗುರುಮೂರ್ತಿ, ಜಿ.ಎಚ್.ವೀರಪ್ಪ, ಲಿಂಗಪಣ್ಣ, ಲೋಕೇಶ್, ಮಹದೇವಣ್ಣ, ಜಿ.ಬಿ.ಚಂದ್ರಶೇಖರ್, ಮೋಹನ್, ನಾಗಣ್ಣ, ಶಿವು, ಶಿವನಂಜು, ಚಂದ್ರಶೇಖರ್ ಸೇರಿದಂತೆ ಗ್ರಾಮದ ಹಲವಾರು ಮಹಿಳೆಯರು ಹಾಜರಿದ್ದರು.