ಮದ್ದೂರು ಪುರಸಭೆ: ಕೃಷಿ ಜಮೀನುಗಳಿಗೆ ಅಕ್ರಮ ಇ-ಖಾತೆ...?

| Published : Dec 05 2024, 12:32 AM IST

ಸಾರಾಂಶ

ಕೃಷಿ ಜಮೀನುಗಳಿಗೆ ಅಕ್ರಮ ಇ-ಖಾತೆ ಹಗರಣದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ತಂಡ ಮದ್ದುರು ಪಟ್ಟಣದ ಪುರಸಭೆಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಸಭೆ ಹಿಂದಿನ ಮುಖ್ಯ ಅಧಿಕಾರಿಯಾಗಿದ್ದ ಆರ್.ಅಶೋಕ್ ಅಧಿಕಾರ ಅವಧಿಯಲ್ಲಿ ಕೃಷಿ ಭೂಮಿಗಳಿಗೆ ಅಕ್ರಮವಾಗಿ ಇ- ಖಾತೆ ಮಾಡಿ ಸರ್ಕಾರ ಮತ್ತು ಪುರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕೃಷಿ ಜಮೀನುಗಳಿಗೆ ಅಕ್ರಮ ಇ-ಖಾತೆ ಹಗರಣದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ತಂಡ ಪಟ್ಟಣದ ಪುರಸಭೆಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪುರಸಭೆ ಹಿಂದಿನ ಮುಖ್ಯ ಅಧಿಕಾರಿಯಾಗಿದ್ದ ಆರ್.ಅಶೋಕ್ ಅಧಿಕಾರ ಅವಧಿಯಲ್ಲಿ ಕೃಷಿ ಭೂಮಿಗಳಿಗೆ ಅಕ್ರಮವಾಗಿ ಇ- ಖಾತೆ ಮಾಡಿ ಸರ್ಕಾರ ಮತ್ತು ಪುರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಅಭಿವೃದ್ಧಿ ಸಹಾಯಕ ನಿರ್ದೇಶಕ ಅಮಿತ್ ತಾರದಾಳೆ ನೇತೃತ್ವದಲ್ಲಿ ಸೋಮಶೇಖರ್ ಸೇರಿದಂತೆ ಮೂವರು ತನಿಖಾ ಅಧಿಕಾರಿಗಳ ತಂಡ ಪುರಸಭೆಗೆ ಭೇಟಿ ನೀಡಿ ಕೃಷಿ ಭೂಮಿಗೆ ಇ-ಸ್ವತ್ತು ಖಾತೆ ಮಾಡಿರುವ ಹಗರಣಗಳ ಕುರಿತು ಇಡೀ ದಿನ ಪರಿಶೀಲನೆ ಮಾಡಿ ನಂತರ ಕೆಲವು ಕಡತಗಳನ್ನು ತನಿಖಾಧಿಕಾರಿಗಳ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆ.

ಪುರಸಭೆಯ ಕಂದಾಯ ವಿಭಾಗದಲ್ಲಿ ಬಾರಿ ಪ್ರಮಾಣದಲ್ಲಿ ಅಕ್ರಮವಾಗಿ ಖಾತೆ ಮಾಡಲಾಗಿದೆ. ಹಗರಣದ ತನಿಖೆಗಾಗಿ ತನಿಖಾ ಆಯೋಗ ರಚಿಸುವಂತೆ ಒತ್ತಾಯಿಸಿ ಶಾಸಕ ಉದಯ್ ಕಳೆದ 2024ರ ಜುಲೈನಲ್ಲಿ ಸರ್ಕಾರಕ್ಕೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಸಲ್ಲಿಸಿದ್ದರು.

ಕೃಷಿ ಭೂಮಿಗೆ ಇ-ಸ್ವತ್ತು ಮಾಡುವಾಗ ಮತ್ತು ಸರ್ವೇ ನಂಬರ್ ಭೂಮಿಗೆ ಸಂಬಂಧಿಸಿದಂತೆ ಪುರಸಭೆ ಪ್ರಾಧಿಕಾರದ ಯಾವುದೇ ಅನುಮತಿ ಪಡೆಯದೆ ಮತ್ತು ಮಾರ್ಗದರ್ಶಿ ಸೂತ್ರ ಅನುಸರಿಸದೇ ಇ-ಖಾತೆ ಮಾಡಿ ಹಿಂದಿನ ಪುರಸಭೆ ಮುಖ್ಯ ಅಧಿಕಾರಿ ಆರ್.ಅಶೋಕ್ ದೊಡ್ಡ ಹಗರಣವನ್ನೇ ನಡೆಸುವ ಮೂಲಕ ಸರ್ಕಾರ ಮತ್ತು ಪುರಸಭೆಗೆ ನ್ಯಾಯ ಬದ್ಧವಾಗಿ ಬರಬೇಕಾಗಿದ್ದ ಆರ್ಥಿಕ ಸಂಪನ್ಮೂಲ ನಷ್ಟ ಉಂಟು ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಶಾಸಕ ಉದಯ್ ದೂರದಲ್ಲಿ ಉಲ್ಲೇಖಿಸಿದ್ದರು.

ಇ-ಖಾತೆಗಳನ್ನು ಬದಲಾವಣೆ ಮಾಡುವಾಗ ಪುರಸಭೆ ನಿಯಮ ಅನುಸರಿಸದೇ ಹಣದಾಸೆಗಾಗಿ ನಿವೇಶನಗಳ ಅಕ್ರಮ ಖಾತೆ ಮಾಡಿ ಸಾರ್ವಜನಿಕರು ವಿನಾಕಾರಣ ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.

ಪುರಸಭೆಯ 2018ರ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಮುಖ್ಯ ಅಧಿಕಾರಿ ಆರ್‌.ಅಶೋಕ್ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಶಾಸಕ ಉದಯ್ ಸರ್ಕಾರ ಮತ್ತು ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಪಡಿಸಿದ್ದರು.