ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಎಚ್ಚರಿಕೆ ನಡುವೆಯೂ ಸಹ ಸಾರಿಗೆ ನೌಕರರ ಮುಷ್ಕರವನ್ನು ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಬಸ್‌ಗಳ ನಿರ್ವಾಹಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದ್ದರಿಂದ ಬಸ್‌ಗಳ ಸಿಬ್ಬಂದಿ ಮತ್ತು ಪ್ರಯಾಣಿಕ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಕನ್ನಡ ಪ್ರಭ ವಾರ್ತೆ ಮದ್ದೂರು

ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಬೆಂಬಲಿಸಿ ಮದ್ದೂರಿನಲ್ಲೂ ಸಹ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಮಂಗಳವಾರ ಸಾರಿಗೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಮುಂಜಾನೆಯಿಂದಲೇ ಬಸ್ ಸಂಚಾರ ಇಲ್ಲದ ಕಾರಣ ಬೇರೆ ಸ್ಥಳಗಳಿಗೆ ತೆರಳಬೇಕಾಗಿದ್ದ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಿಗೆ ತೆರಳಬೇಕಾಗಿದ್ದ ರೋಗಿಗಳು ಹಾಗೂ ಸಾರ್ವಜನಿಕರು ಪರದಾಡಿದರು.

ಗ್ರಾಮೀಣ ಪ್ರದೇಶ ಮತ್ತು ಬೆಂಗಳೂರು,ತುಮಕೂರು, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸೋಮವಾರ ತೆರಳಿದ್ದ ಬಸ್‌ಗಳು ಮಾತ್ರ ಬೆಳಿಗ್ಗೆ ಸಂಚಾರ ಮುಗಿಸಿ ಮತ್ತೆ ಡಿಪೋಗೆ ವಾಪಸ್ ಆದವು. ಉಳಿದಂತೆ ಮದ್ದೂರು ಡಿಪೋ ಇಂದ ನೆರೆ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶದ 82 ಮಾರ್ಗಗಳಲ್ಲಿ 47 ಎಕ್ಸ್‌ಪ್ರೆಸ್ ಮತ್ತು 35 ಸಾಮಾನ್ಯ ಮಾರ್ಗದ ಬಸ್‌ಗಳು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಗೈರಾದ ಕಾರಣ ಡಿಪೋದಲ್ಲಿ ಸಾಲುಗಟ್ಟು ನಿಂತಿದ್ದವು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಟೆಂಪೋಗಳ ದರ್ಬಾರ್ ಕಂಡುಬಂದಿತು.

ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಎಚ್ಚರಿಕೆ ನಡುವೆಯೂ ಸಹ ಸಾರಿಗೆ ನೌಕರರ ಮುಷ್ಕರವನ್ನು ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಬಸ್‌ಗಳ ನಿರ್ವಾಹಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದ್ದರಿಂದ ಬಸ್‌ಗಳ ಸಿಬ್ಬಂದಿ ಮತ್ತು ಪ್ರಯಾಣಿಕ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಆದರೂ ಸಹ ಸಾರ್ವಜನಿಕರು ವಿಧಿ ಇಲ್ಲದೆ ಹೆಚ್ಚಿನ ಹಣ ತೆತ್ತು ಪ್ರಯಾಣ ಬೆಳೆಸಿದರು.

ಮದ್ದೂರು ಡಿಪೋ ವ್ಯವಸ್ಥಾಪಕ ರಾಘವೇಂದ್ರ ಹಾಗೂ ಅಧಿಕಾರಿಗಳು ಡಿಪೋ ಮತ್ತು ಬಸ್ ನಿಲ್ದಾಣದಲ್ಲಿ ಹಾಜರಾಗಿ ಬಸ್‌ಗಳ ಸಂಚಾರಕ್ಕೆ ಸಾಕಷ್ಟು ಪ್ರಯತ್ನ ನಡೆಸಿದರಾದರೂ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದ ಕರ್ತವ್ಯದಿಂದ ದೂರ ಉಳಿದರು.

ಮುಷ್ಕರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ವೃತ್ತ ನಿರೀಕ್ಷಕರಾದ ಶಿವಕುಮಾರ್, ವೆಂಕಟೇಗೌಡ, ಪಿಎಸ್ಐ ಗಳಾದ ಮಂಜುನಾಥ್, ರವಿ, ಮದ್ದೂರು ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ, ಕೆಸ್ತೂರು, ಬೆಸಗರಹಳ್ಳಿ, ಕೊಪ್ಪ ಪೊಲೀಸ್ ಠಾಣೆಗಳ ಪಿಎಸ್ಐ ಗಳಾದ ಪ್ರಕಾಶ್, ಭೀಮಪ್ಪ ಬಾಣಸಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಸ್ ನಿಲ್ದಾಣ. ಡಿಪೋ ಹಾಗೂ ಸಂಚಾರ ಮಾರ್ಗಗಳಲ್ಲಿವಿಶೇಷ ಗಸ್ತು ಕಾರ್ಯ ನಡೆಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆ ಚರ ವಹಿಸಿದ್ದರು.