ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಗ್ರಾಮ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಶನಿವಾರಕ್ಕೆ 300 ದಿನಕ್ಕೆ ಕಾಲಿರಿಸಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಗ್ರಾಮ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಶನಿವಾರಕ್ಕೆ 300 ದಿನಕ್ಕೆ ಕಾಲಿರಿಸಿದೆ.ಜಿಲ್ಲಾ ರೈತ ಸಂಘ, ಜಯ ಕರ್ನಾಟಕ ಪರಿಷತ್ತು, ಸಾಹಿತಿಗಳು, ಬುದ್ಧಿಜೀವಿಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಿಲ್ಲಾ ರೈತ ಸಂಘದ ಮುಖಂಡ ಬೋರಯ್ಯ, ಗೆಜ್ಜಲಗೆರೆ ಗ್ರಾಮ ಕಳೆದ 2002ರಲ್ಲಿ ಕಬ್ಬಿನ ಚಳವಳಿ ನಡೆದಾಗ ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ರೈತರು ಪ್ರಾಣ ತ್ಯಾಗ ಮಾಡುವ ಮೂಲಕ ಹೋರಾಟದ ಗ್ರಾಮ ಸಾಬೀತು ಪಡಿಸಿದೆ ಎಂದರು.
ಇದನ್ನು ಗಣನೆಗೆ ತೆಗೆದುಕೊಳ್ಳದ ಸರ್ಕಾರ ಮತ್ತು ಜನಪ್ರತಿನಿಧಿಗಳು ಗ್ರಾಮಸ್ಥರ ಹೋರಾಟವನ್ನು ಲಘುವಾಗಿ ಪರಿಣಮಿಸಿದ್ದಾರೆ. ಈ ಧೋರಣೆ ಕೈಬಿಟ್ಟು ಗೆಜ್ಜಲಗೆರೆ ಗ್ರಾಮವನ್ನು ಗ್ರಾಪಂ ವ್ಯಾಪ್ತಿಯಲ್ಲಿ ಉಳಿಸಬೇಕು ಎಂದು ಆಗ್ರಹಪಡಿಸಿದರು.ಸರ್ಕಾರ ಹಸಿರು ವಲಯವಾದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡುವುದನ್ನು ಕೈಬಿಡಬೇಕು. ಇಲ್ಲವಾದಲ್ಲಿ ರೈತರ ಬೀದಿಗಿಳಿದು ಬಿಡದಿ ಟೌನ್ ಶಿಪ್ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೈ ಕರ್ನಾಟಕ ಪರಿಷತ್ತಿನ ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಗ್ರಾಮಸ್ಥರು ನಗರಸಭೆಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಕಳೆದ 300 ದಿನಗಳಿಂದ ತಾಳ್ಮೆ ಕಳೆದುಕೊಳ್ಳದೆ ಶಾಂತಿಯುತ ಚಳವಳಿ ನಡೆಸುತ್ತಿದ್ದಾರೆ . ಜನಪ್ರತಿನಿಧಿಗಳು ತಮ್ಮ ಹಠಮಾರಿ ಧೋರಣೆ ಕೈಬಿಟ್ಟು ಗ್ರಾಮಸ್ಥರು ದಂಗೆ ಹೇಳುವ ಮೊದಲು ಸಮಸ್ಯೆಗೆ ಪರಿಹಾರ ರೂಪಿಸಲು ಚಿಂತನೆ ನಡೆಸಬೇಕು ಎಂದರು.ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಸಂಬಂಧಿಸಿದಂತೆ ಶಾಸಕ ಕೆ.ಎಂ.ಉದಯ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಗ್ರಾಮವನ್ನು ನಗರಸಭೆ ವ್ಯಾಪ್ತಿಯಿಂದ ಕೈ ಬಿಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಶಾಸಕರ ಭರವಸೆ ಮತ್ತು ನ್ಯಾಯಾಲಯದ ತೀರ್ಪು ಬರುವವರೆಗೆ ಶಾಂತ ರೀತಿಯಿಂದ ಚಳವಳಿ ಮುಂದುವರಿಸಲಾಗುವುದು ಎಂದರು.
ಧರಣಿಯಲ್ಲಿ ರೈತ ಮುಖಂಡರಾದ ಚಂದ್ರಣ್ಣ, ಜಿ.ಪಿ.ಶಿವಶಂಕರ್, ಜಿ.ಟಿ.ವೀರಪ್ಪ, ಕುದುರೆಗುಂಡಿ ನಾಗರಾಜು, ಮುದ್ದೇಗೌಡ, ಜಿ.ಎಚ್.ವೀರಪ್ಪ, ಜಯ ಕರ್ನಾಟಕ ಪರಿಷತ್ತಿನ ಕೆ.ಬಿ.ಕೆಂಪೇಗೌಡ, ಬಿ. ಪುಟ್ಟಸ್ವಾಮಿ, ತನುಜ, ಸುಶೀಲಮ್ಮ, ನಾಗಮ್ಮ, ಜಿ. ರಾಜೇಶ್ ಮತ್ತಿತರರು ಭಾಗವಹಿಸಿದ್ದರು.