ಮದ್ದೂರು ತಾಲೂಕು ವ್ಯವಸಾಯೋತನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಗುಂಪು ಸಹಕಾರ ಸಂಘದ ನೌಕರ ಮೋಹನ್ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ವ್ಯವಸಾಯೋತನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಗುಂಪು ಸಹಕಾರ ಸಂಘದ ನೌಕರ ಮೋಹನ್ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜರುಗಿದೆ.ನಕಲಿ ಮತದಾನ ಹಾಗೂ ನೌಕರ ಮೋಹನ್ ಮೇಲೆ ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳೊಂದಿಗೆ ಸೇರಿ ಪ್ರತಿಭಟನೆಗಿಳಿದ ಪರಿಣಾಮ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಎಸ್ಪಿ ವಿ.ಜೆ.ಡಾ.ಶೋಭಾ ರಾಣಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್, ಮಳವಳ್ಳಿ ಡಿವೈ ಎಸ್ ಪಿ ಯಶವಂತ ಕುಮಾರ್ ಅವರುಗಳು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಹ ಬದಿಗೆ ತಂದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಟಿಎಪಿಸಿಎಂಎಸ್ ನೌಕರ ಮೋಹನ್ ಗಾಯಗೊಂಡಿದ್ದು, ಈತನನ್ನು ಪೊಲೀಸರು ವರ್ಷಕ್ಕೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಗುಂಪು ಅಧಿಕಾರಿಗಳೊಂದಿಗೆ ಶಾಮೀಲಾಗಿ ಮತದಾರರ ಗುರುತಿನ ಚೀಟಿ ಮೇಲೆ ಮೃತಪಟ್ಟವರ ಭಾವಚಿತ್ರಕ್ಕೆ ಬದಲಾಗಿ ಬೇರೆಯವರ ಭಾವಚಿತ್ರವನ್ನು ಅಂಟಿಸಿ ನಕಲಿ ಮತದಾನ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಸೇರಿ ಆಕ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಚುನಾವಣೆಯಲ್ಲಿ ಅಕ್ರಮ ಮತದಾನ ನಡೆಯುತ್ತಿದೆ. ಹೀಗಾಗಿ ಚುನಾವಣಾಧಿಕಾರಿಗಳು ಚುನಾವಣೆ ರದ್ದುಪಡಿಸುವಂತೆ ಪಟ್ಟು ಹಿಡಿದು ಧರಣಿ ನಡೆಸಿದರು. ಶಾಸಕ ಕೆ.ಎಂ.ಉದಯ್, ತಮ್ಮ ಬೆಂಬಲಿಗರನ್ನು ಸಮಾಧಾನ ಪಡಿಸಿದರು. ಮೈತ್ರಿ ನಾಯಕರಾದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ನುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಬೆಂಬಲಿಗರು ಟಿಎಪಿಸಿಎಂಎಸ್ ನೌಕರರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ನಂತರ ಪೊಲೀಸರು ಮತದಾರರನ್ನು ಹೊರತುಪಡಿಸಿ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಚುನಾವಣೆ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಕಳಿಸಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ.ನಕಲಿ ಖಾತೆ ವಿರುದ್ಧ ಡಿ.ಸಿ.ತಮ್ಮಣ್ಣ ಪೊಲೀಸರಿಗೆ ದೂರುಮದ್ದೂರು: ಟಿಎಪಿಸಿಎಂಎಸ್ ನ ನಿರ್ದೇಶಕರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ವಿಚಾರದಲ್ಲಿ ನನ್ನ ಬೆಂಬಲವಿಲ್ಲ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮತ್ತು ಆಧಾರ ರಹಿತ ಮಾಹಿತಿ ಹರಡಿರುವ ಬಗ್ಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂದೇಶ ಮತ್ತು ಖಾತೆಗಳನ್ನು ತೆರೆದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.