ಸಾರಾಂಶ
ಮದುವೆಯಾಗುವುದಾಗಿ ನಂಬಿಸಿ ಕಿರುತೆರೆ ಸಹ ಕಲಾವಿದೆಯೋರ್ವಳ ಮೇಲೆ ನಟ ಮಡೆನೂರು ಮನು ಅತ್ಯಾಚಾರ ಎಸಗಿದ ಆರೋಪದ ಹಿನ್ನಲೆಯಲ್ಲಿ ಕೃತ್ಯ ನಡೆದ ಇಲ್ಲಿನ ಖಾಸಗಿ ಲಾಡ್ಜ್ ಗೆ ಶನಿವಾರ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸಂತ್ರಸ್ಥೆಯ ಜತೆ ಬೇಟಿ ನೀಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಜರು ಪ್ರಕ್ರಿಯೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮದುವೆಯಾಗುವುದಾಗಿ ನಂಬಿಸಿ ಕಿರುತೆರೆ ಸಹ ಕಲಾವಿದೆಯೋರ್ವಳ ಮೇಲೆ ನಟ ಮಡೆನೂರು ಮನು ಅತ್ಯಾಚಾರ ಎಸಗಿದ ಆರೋಪದ ಹಿನ್ನಲೆಯಲ್ಲಿ ಕೃತ್ಯ ನಡೆದ ಇಲ್ಲಿನ ಖಾಸಗಿ ಲಾಡ್ಜ್ ಗೆ ಶನಿವಾರ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸಂತ್ರಸ್ಥೆಯ ಜತೆ ಬೇಟಿ ನೀಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಜರು ಪ್ರಕ್ರಿಯೆ ನಡೆಸಿದರು.ಪಟ್ಟಣದಲ್ಲಿ ಕಳೆದ ವರ್ಷ ನ.28 ರಂದು ನಡೆದ ಕಾರ್ಯಕ್ರಮಕ್ಕೆ ಮಡೆನೂರು ರವಿ ಕೆಲ ಕಾಮಿಡಿ ನಟರ ಜತೆ ನನ್ನನ್ನು ಕರೆದುಕೊಂಡು ಬಂದು ಕಾರ್ಯಕ್ರಮ ನಡೆಸಿದ್ದು, ನಂತರದಲ್ಲಿ ತಂಗಿದ್ದ ಖಾಸಗಿ ಲಾಡ್ಜ್‌ಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ಥೆ ವತ್ಸಲಾ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಶನಿವಾರ ಮದ್ಯಾಹ್ನದ ವೇಳೆಗೆ ಸಂತ್ರಸ್ಥೆಯ ಜತೆಗೆ ಆಗಮಿಸಿದ ಪೊಲೀಸರು ಸಂತ್ರಸ್ಥೆ ಉಳಿದುಕೊಂಡಿದ್ದ ಖಾಸಗಿ ಲಾಡ್ಜ್‌ನ ಕೊಠಡಿಯನ್ನು ಸಂಪೂರ್ಣ ಪರಿಶೀಲಿಸಿದರು.
ನಂತರದಲ್ಲಿ ಲಾಡ್ಜ್‌ನ ಮಾಲೀಕರಿಗೆ ಕಳೆದ ನ.28 ರಿಂದ 30 ರವರೆಗಿನ ಲೆಡ್ಜರ್ ಪುಸ್ತಕ ದೃಡೀಕರಿಸಿ ನೀಡುವಂತೆ, ರಿಸೆಪ್ಶನ್ ಸೆಂಟರ್ ಹಾಗೂ ಹೋಟೆಲ್ ರೂಮ್ ಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೆನ್ ಡ್ರೈವ್ ಗೆ ವರ್ಗಾವಣೆ ಮಾಡಿ ನೀಡುವಂತೆ, ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಮಡೆನೂರು ಮನು ಹಾಗೂ ಸಂತ್ರಸ್ಥೆ ವತ್ಸಲಾ ರವರಿಂದ ಪಡೆದುಕೊಂಡ ದಾಖಲೆ ನೀಡುವಂತೆ ಹಾಗೂ ಆ ಸಂದರ್ಭದಲ್ಲಿ ಲಾಡ್ಜ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಮ್ಯಾನೇಜರ್, ರೂಮ್ ಬಾಯ್ ವಿಚಾರಣೆಗೆ ಠಾಣೆಗೆ ಕಳುಹಿಸಿಕೊಡುವಂತೆ ನೋಟೀಸ್ ನೀಡಿದ್ದಾರೆ.ಪೊಲೀಸರ ನೋಟೀಸ್ ಸ್ವೀಕರಿಸಿದ ಲಾಡ್ಜ್ ಮಾಲೀಕರು ಘಟನೆ ನಡೆದ ಅವಧಿಯಲ್ಲಿ ಬಾಡಿಗೆ ಪಡೆದುಕೊಂಡಿದ್ದವರು ಬದಲಾಗಿದ್ದು, ಇದೀಗ ಹೊಸಬರು ಲಾಡ್ಜ್ ವಹಿಸಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದಾಗ ಪೊಲೀಸ್ ಅಧಿಕಾರಿಗಳು ಕೂಡಲೇ ಹಳಬರನ್ನು ಕರೆಯಿಸಿ ಎಲ್ಲ ದಾಖಲೆಗಳನ್ನು ಪಡೆದುಕೊಂಡು ಹಸ್ತಾಂತರಿಸುವಂತೆ ಸೂಚಿಸಿದರು.