ಸಾರಾಂಶ
ಭಟ್ಕಳ: ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಾದೇವ ನಾಯ್ಕ ಅವರು ತಮ್ಮ ಸಮಯಪ್ರಜ್ಞೆಯಿಂದ ಹಳಿ ತಪ್ಪಿ ಅಪಾಯಕ್ಕೆ ಸಿಲುಕಲಿದ್ದ ರೈಲನ್ನು ನಿಲ್ಲಿಸುವುದರ ಮೂಲಕ ಸಾವಿರಾರು ಜನರ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
೫ ನಿಮಿಷದಲ್ಲಿ ೫೦೦ ಮೀ. ಓಡಿದ ಅವರು ಅಪಾಯದ ಸ್ಥಿತಿ ಎದುರಾಗುವ ಪೂರ್ವದಲ್ಲೇ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ಮೆಚ್ಚುಗೆ ಪಡೆದಿದ್ದಾರೆ.ಸೆ. 4ರಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕುಮಟಾ- ಹೊನ್ನಾವರ ನಡುವೆ ಹಳಿಗಳ ವೆಲ್ಡಿಂಗ್ ಬಿಟ್ಟಿತ್ತು. ಇದರಿಂದ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜಧಾನಿ ಎಕ್ಸಪ್ರೆಸ್ ರೈಲು ಹಳಿ ತಪ್ಪುವ ಸಾಧ್ಯತೆ ಇತ್ತು. ಬುಧವಾರ ನಸುಕಿನ ೪.೫೧ಕ್ಕೆ ಬ್ಯಾಟರಿ ಹಿಡಿದು ರೈಲ್ವೆ ಮಾರ್ಗ ಪರಿಶೀಲಿಸುತ್ತಿದ್ದ ಮಾದೇವ ನಾಯ್ಕ ಅವರು ಇದನ್ನು ಗಮನಿಸಿದ್ದು, ತಿರುವನಂತಪುರದಿಂದ ನವದೆಹಲಿ ಕಡೆ ಹೋಗುವ ರೈಲನ್ನು ಹೊನ್ನಾವರದಲ್ಲಿಯೇ ನಿಲ್ಲಿಸಲು ಸ್ಟೇಶನ್ ಮಾಸ್ತರ್‌ಗೆ ಫೋನ್ ಮಾಡಿದ್ದರು. ಆದರೆ ಬೆಳಗ್ಗೆ ೪.೫೯ಕ್ಕೆ ರೈಲು ಹೊನ್ನಾವರದಿಂದ ಮುಂದೆ ಸಾಗಿಯಾಗಿತ್ತು. ಸ್ಟೇಷನ್ ಮಾಸ್ಟರ್ ಲೋಕೋ ಪೈಲಟ್‌ಗೆ ಫೋನ್ ಮಾಡಿದ್ದರೂ ಸರಿಯಾದ ಸಂಪರ್ಕ ಸಾಧ್ಯವಾಗಿರಲಿಲ್ಲ. ಕೇವಲ ೮ ನಿಮಿಷದ ಅವಧಿಯಲ್ಲಿ ರೈಲು ಹಳಿ ವೆಲ್ಡಿಂಗ್ ಬಿಟ್ಟ ಸ್ಥಳ ತಲುಪುವ ಸಾಧ್ಯತೆ ಅರಿತ ಮಾದೇವ ನಾಯ್ಕ ಅವರು ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ರೈಲ್ವೆ ಹಳಿಗಳ ಮೇಲೆ ಹೊನ್ನಾವರದ ಕಡೆ ಓಡಲು ಆರಂಭಿಸಿ ಅಪಾಯದ ಮುನ್ಸೂಚನೆ ನೀಡಿ ಮಾರ್ಗದ ನಡುವೆಯೇ ಕೊನೆಗೂ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ತಂತ್ರಜ್ಞರು ಆಗಮಿಸಿ ರೈಲ್ವೆ ಹಳಿ ಸರಿಪಡಿಸಿದ ನಂತರ ರೈಲು ಮುಂದೆ ಚಲಿಸಿತು.
ಮಾದೇವ ನಾಯ್ಕ ಅವರ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆ ಮೆಚ್ಚಿದ ಕೊಂಕಣ ರೈಲ್ವೆ ಅಧಿಕಾರಿಗಳು ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ.;Resize=(128,128))
;Resize=(128,128))