ಸಾರಾಂಶ
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಗರದಲ್ಲಿ ಶನಿವಾರ ಪ್ರಮುಖರ ಸಭೆ ನಡೆಸಿದರು.ನಗರದ ಜೆ.ಎಲ್.ಬಿ ರಸ್ತೆಯ ಮಾಧವ ಕೃಪದಲ್ಲಿ ಶನಿವಾರ ನಡೆದ ವಿಶೇಷ ಬೈಠಕ್ ನಲ್ಲಿ ಭಾಗಿಯಾಗಿದ್ದ ಅವರು ಆರ್.ಎಸ್.ಎಸ್ ಪ್ರಚಾರಕ ವಾಮನ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ನಗರ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಮಹತ್ವದ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕು. ಪಕ್ಷ ಸಂಘಟನೆ ಕಡೆಗೆ ಗಮನಹರಿಸಬೇಕು. ಹಳೆಯ ವಿಚಾರಗಳನ್ನು ಮರೆತು ಪ್ರತಿಯೊಂದು ಮನೆ, ಬೂತ್, ವಾರ್ಡು, ಕ್ಷೇತ್ರದಲ್ಲಿ ಪಕ್ಷ ಬಲಪಡಿಸುವ ಕೆಲಸ ಆಗಬೇಕು ಎಂದರು.ನಂತರ ಮುಕ್ತ ಸಂವಾದ ನಡೆಸಿದರು. ಒನ್ ನೇಷನ್- ಒನ್ ರೇಷನ್, ಏಕರೂಪ ನಾಗರಿಕ ಸಂಹಿತೆ ಜಾರಿ ಮೊದಲಾದ ವಿಚಾರಗಳ ಕುರಿತು ಪ್ರಶ್ನಿಸಿದಾಗ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಳಿದಾಗ ಮುಂದೆ ಇಂತಹ ದಾಳಿಗೆ ಅವಕಾಶ ಆಗದಂತೆ ಉಗ್ರರನ್ನು ಬುಡಸಮೇತ ಕಿತ್ತು ಹಾಕಬೇಕು. ಉಗ್ರರ ದಾಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದರು.ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಭದ್ರತೆಗೆ ಅಪಾಯ ಇಲ್ಲ ಎನ್ನುವ ಭಾವನೆ ಜನರಲ್ಲಿದೆ. ಉಗ್ರರ ದಾಳಿಯಿಂದ ನಮಗೆ ಹಿನ್ನಡೆ ಕಾಣಿಸುತ್ತಿದೆ ಎಂದು ಮುಖಂಡರೊಬ್ಬರು ಹೇಳಿದರು. ಇದಕ್ಕೆ, ಮೋದಿ ಅವರಾಗಲೀ ಅಥವಾ ಗೃಹಸಚಿವರು ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಭಾರತ ಶತಮಾನಗಳಿಂದ ಮತ್ತೆ ಮತ್ತೆ ಪುಟಿದೆದ್ದು ಬಂದಿದೆ. ಈ ಕೃತ್ಯವನ್ನು ಸಹಿಸಲಾಗದು ಎಂದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಸಹ ಪ್ರಭಾರಿ ಎನ್.ವಿ. ಫಣೀಶ್, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್. ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ಬಿ.ಎಂ. ರಘು, ಮಾಜಿ ಮೇಯರ್ ಎಸ್. ಸತೀಶ್ ಸ್ವಾಮಿ, ಶಿವಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಹೇಮಾನಂದೀಶ್, ಮುಖಂಡ ಜಯಪ್ರಕಾಶ್ ಮೊದಲಾದರು ಸಭೆಯಲ್ಲಿ ಪಾಲ್ಗೊಂಡಿದ್ದರು.